ಚಾಮರಾಜನಗರ: ವೀರಪ್ಪನ್ ಅಳಿದ ಬಳಿಕವೂ ಹನೂರು ತಾಲೂಕಿನ ಗೋಪಿನಾಥಂ, ಪಾಲಾರ್ ಸುತ್ತಮುತ್ತಲು ಬೇಟೆಗಾರರು ಹಾವಳಿ ಹೆಚ್ಚಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಕಳ್ಳ ಬೇಟೆಗಾರರ ನಡುವೆ ಗುಂಡಿನ ಚಕಮಕಿ ನಡೆದಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಬರುವ ಪಾಲಾರ್ ಎಂಬಲ್ಲಿ ಜಿಂಕೆ ಬೇಟೆಯಾಡಿ ತೆರಳುತ್ತಿದ್ದ ಅಂದಾಜು ನಾಲ್ವರು ಕಳ್ಳಬೇಟೆಗಾರರು ಹಾಗೂ ಮೂವರು ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಕಣ್ತಪ್ಪಿಸಿ ಕಳ್ಳ ಬೇಟೆಗಾರರು ನದಿಗೆ ಹಾರಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ ಬೇಟೆಗಾರರು ತಲೆ ಮೇಲೆ ಅಳವಡಿಸಿಕೊಂಡಿದ್ದ ಕ್ಯಾಪ್ ಟಾರ್ಚ್ಗಳು ಪತ್ತೆಯಾಗಿದೆ. ಈ ಘಟನೆ ಬಗ್ಗೆ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರು ದಾಖಲಿಸಿಕೊಂಡಿರುವ ಪಲೆಮಹದೇಶ್ವರ ಬೆಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆ ಬಗ್ಗೆ ಎಸಿಎಫ್ ಅಂಕರಾಜು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ತಮಿಳುನಾಡು ಹಾಗೂ ಕರ್ನಾಟಕದ ನಡುವೆ ಗಡಿಯಂತೆ ಪಾಲಾರ್ ನದಿ ಹರಿಯುತ್ತಿದ್ದು, ಕಳ್ಳ ಬೇಟೆಗಾರರು ತಮಿಳುನಾಡು ಭಾಗದಿಂದ ತೆಪ್ಪದ ಮೂಲಕ ರಾಜ್ಯಕ್ಕೆ ಬಂದು ಜಿಂಕೆ ಬೇಟೆಯಾಡುತ್ತಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಹೋದ ಅರಣ್ಯ ಸಿಬ್ಬಂದಿ ಮೇಲೆ ಕಳ್ಳಬೇಟೆಗಾರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅರಣ್ಯ ಇಲಾಖೆ ಮತ್ತು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ಚಕಮಕಿ ನಡೆದಿರುವ ಸ್ಥಳದಲ್ಲಿ ನಾಡ ಬಂದೂಕು ಪತ್ತೆಯಾದ ಹಿನ್ನೆಲೆಯಲ್ಲಿ ಕಾವೇರಿ ವನ್ಯಜೀವಿಧಾಮದ ಗೋಪಿನಾಥಂ ವಲಯ ಅರಣ್ಯಾಧಿಕಾರಿ ಎಸ್.ಸಂಪತ್ ಪಟೇಲ್ ಎನ್ನುವವರು ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು ನಾಲ್ವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.
14ರ ಮಧ್ಯರಾತ್ರಿ ಅಡಿ ಪಾಲರ್ ಎಂಬ ಸ್ಥಳದಲ್ಲಿ ಮೂವರು ಫಾರೆಸ್ಟ್ ಗಾರ್ಡ್ಗಳು ಕರ್ತವ್ಯ ನಿರ್ವಹಿಸುತ್ತಿದ್ದಾಗ ಪಾಲರ್ ನದಿಯ ಹಿನ್ನೀರಿನಲ್ಲಿ ತೆಪ್ಪ ನಿಲ್ಲಿಸಿರುವುದು ಕಂಡು ಬಂದಿದ್ದರಿಂದ ಕಳ್ಳ ಬೇಟೆಗಾರರು ಬಂದಿರಬಹುದು ಎಂದು ಶಂಕಿಸಿ ಬಂಡೆಯ ಬಳಿ ಮರೆಯಾಗಿ ಕಾಯುತ್ತ ಕುಳಿತಿದ್ದರು. ಈ ವೇಳೆ ನದಿಯ ಇನ್ನೊಂದು ಭಾಗದಲ್ಲಿ ಗಸ್ತು ನಡೆಸುತ್ತಿದ್ದ ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ ಸರ್ಚ್ ಲೈಟ್ ಹಾಕಿದರು. ಆ ವೇಳೆ ಕೇವಲ 20-25 ಮೀಟರ್ ಅಂತರದಲ್ಲಿದ್ದ ಕಳ್ಳಬೇಟೆಗಾರರು, ನಮ್ಮ ಸಿಬ್ಬಂದಿಗೆ ಮುಖಾಮುಖಿಯಾಗಿದ್ದಾರೆ. ಖಾಕಿ ಸಮವಸ್ತ್ರಧಾರಿಗಳಾದ ನಮ್ಮ ಸಿಬ್ಬಂದಿ ಕಂಡು ಕಳ್ಳಬೇಟೆಗಾರರು ಬಂದೂಕಿನಿಂದ ನೇರವಾಗಿ ಗುಂಡು ಹಾರಿಸತೊಡಗಿದರು. ಈ ವೇಳೆ, ಆತ್ಮ ರಕ್ಷಣೆಗಾಗಿ ಸಿಬ್ಬಂದಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದು ಅಷ್ಟರಲ್ಲಾಗಲೇ ಬೇಟೆಗಾರರು ನದಿ ದಡದಲ್ಲಿ ಓಡಿ ಪರಾರಿಯಾದರು ಎಂದು ದೂರು ಪ್ರತಿಯಲ್ಲಿ ಉಲ್ಲೇಖ ಮಾಡಲಾಗಿದೆ.