ಗುಂಡ್ಲುಪೇಟೆ: ಕೋವಿಡ್ ಹಿನ್ನೆಲೆ ನೆರೆ ರಾಜ್ಯಗಳು ಪರಸ್ಪರ ಅಂತಾರಾಜ್ಯ ಸಂಚಾರಕ್ಕೆ ನಿರ್ಬಂಧ ಹೇರಿಕೊಂಡಿದ್ದು, ಇದು ತಾಲೂಕಿನಲ್ಲಿ ಚೆಂಡು, ಮಲ್ಲಿಗೆ ಹೂ ಬೆಳೆಗಾರರ ಮೇಲೆ ಪರಿಣಾಮ ಬೀರಿದೆ.
ಕೇರಳದಲ್ಲಿ ಪ್ರಸಿದ್ಧ ಓಣಂ ಹಬ್ಬವನ್ನು ಆಚರಿಸಲಾಗುತ್ತಿದೆ. ತಾಲೂಕಿನ ನೂರಕ್ಕೂ ಹೆಚ್ಚಿನ ವ್ಯಾಪಾರಿಗಳು ಇಲ್ಲಿಂದ ಹೂಗಳನ್ನು ಕೊಂಡು ಕೇರಳದ ವಿವಿಧ ಪ್ರದೇಶದಲ್ಲಿ ಮಾರಾಟ ಮಾಡಿ ಆದಾಯ ಪಡೆಯುತ್ತಿದ್ದರು. ಜೊತೆಗೆ ಚೆಂಡು, ಮಲ್ಲಿಗೆ ಬೆಳೆಯುವವರಿಗೂ ಉತ್ತಮ ಬೆಲೆ ಸಿಗುತ್ತಿತ್ತು. ಆದರೆ ಕೊರೊನಾ ಪರಿಣಾಮ ಕೇರಳ ಸರ್ಕಾರ ಹೊರಗಡೆಯಿಂದ ಹೂಗಳು ಬರಬಾರದು ಎಂದು ಆದೇಶ ಹೊರಡಿಸಿರುವುದರಿಂದ ತಾಲೂಕಿನ ಹೂ ಬೆಳೆಗಾರರ ಆದಾಯದ ಮೇಲೆ ಪರಿಣಾಮ ಬೀರಿದೆ.
ಓಣಂ ಸಂದರ್ಭದಲ್ಲಿ ಹೂಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಮಹಿಳೆಯರು ಪೂಕುಳಂ (ಹೂ ಗಳಿಂದ ರಂಗೋಲಿ ಬಿಡಿಸುವುದು) ಮಾಡುತ್ತಾರೆ. ಜೊತೆಗೆ ಹಿಂದೂಗಳು ಮಾತ್ರವಲ್ಲದೆ ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಸಮುದಾಯದ ಅನೇಕರು ಸಹ ಪ್ರಸಿದ್ಧ ಓಣಂ ಹಬ್ಬ ಆಚರಿಸುತ್ತಾರೆ.
ತಾಲೂಕಿನ ಮದ್ದಯ್ಯನಹುಂಡಿ, ಬೇರಾಂಬಾರಿ, ಚೆನ್ನಮಲ್ಲಿಪುರ, ಹೊಂಗಳ್ಳಿ, ಬೀಮನಬೀಡು, ಗೋಪಾಲಪುರ ಸೇರಿದಂತೆ ಕೇರಳದ ಗಡಿಭಾಗದಲ್ಲಿ ಬರುವ ಗ್ರಾಮೀಣ ಪ್ರದೇಶಗಳಲ್ಲಿ ಚೆಂಡು, ಮಲ್ಲಿಗೆ ಬೆಳೆದು ಅಲ್ಲಿನವರಿಗೆ ವ್ಯಾಪಾರ ಮಾಡಿ ಆದಾಯ ಗಳಿಸುತ್ತಿದ್ದರು. ಅನೇಕರು ಇಲ್ಲಿನ ಬೆಳೆಗಾರರಿಂದ ಖರೀದಿ ಮಾಡಿ ಕೇರಳದಲ್ಲಿ ಮಾರಾಟ ಮಾಡುತ್ತಿದ್ದರು.
ತಾಲೂಕಿನಲ್ಲಿ ಚೆಂಡು, ಮಲ್ಲಿಗೆ ಕಾರ್ಖಾನೆ ಇದ್ದರೂ ಸಹ ಹೆಚ್ಚಿನ ಬೆಳೆಗಾರರು ಕೇರಳವನ್ನು ಆಶ್ರಯಿಸಿದ್ದರು. ಇಲ್ಲಿನ ಕಾರ್ಖಾನೆಯಲ್ಲಿ ಕೆಜಿ ಗೆ 6 ರಿಂದ 7 ರೂಪಾಯಿ ನೀಡಿದರೆ, ಓಣಂ ಸಂದರ್ಭದಲ್ಲಿ 10ರಿಂದ 12 ರೂಪಾಯಿಗೆ ಖರೀದಿ ಆಗುತ್ತದೆ, ಉತ್ತಮ ಲಾಭ ಸಿಗುತ್ತಿತ್ತು. ಈ ಬಾರಿ ಕೊರೊನಾ ಮಹಾಮಾರಿಯಿಂದ ಬೆಳೆಗಾರರು ಹಾಗೂ ವ್ಯಾಪಾರಿಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಆದಾಯ ಸಿಗಲಿಲ್ಲ ಎಂದು ಪಟ್ಟಣದ ಹೂವಿನ ವ್ಯಾಪಾರಿ ಮಹದೇಶ್ ತಿಳಿಸಿದ್ದಾರೆ.
ತಮಿಳುನಾಡಿನ ಗೂಡಲುರು ಭಾಗದಲ್ಲಿ ಸಹ ಹೆಚ್ಚಿನ ಮಳೆಯಾಳಿಗಳು ಇರುವುದರಿಂದ ಅಲ್ಲೂ ಸಹ ಹೆಚ್ಚಿನ ಹೂ ಮಾರಾಟ ಆಗುತ್ತಿತ್ತು. ಪ್ರತಿ ದಿನ ಬೆಳಗಿನ ಜಾವ ತಮಿಳುನಾಡಿನ ಸಾರಿಗೆಯಲ್ಲಿ ಹೂ ಕೊಂಡೊಯ್ದು ಮಾರಾಟ ಮಾಡುತ್ತಿದ್ದೆವು. ಸಾರಿಗೆ ಸಂಪರ್ಕ ಕಡಿತವಾಗಿರುವುದರಿಂದ ಇದನ್ನು ನಂಬಿ ಜೀವನ ನಡೆಸುತ್ತಿದ್ದ ನಮಗೆ ತೊಂದರೆಯಾಗಿದೆ ಎಂದು ವ್ಯಾಪಾರಿ ಸುಂದರಮ್ಮ ತಿಳಿಸಿದರು.