ಚಾಮರಾಜನಗರ: ಕೂಲಿ ಅರಸಿ ಕೇರಳಕ್ಕೆ ಗುಂಡ್ಲುಪೇಟೆ ತಾಲೂಕಿನ ಕೆಲ ಗ್ರಾಮದಿಂದ ಕಾರ್ಮಿಕರು ಗುಳೆ ಹೋಗುತ್ತಿದ್ದು, ಮಕ್ಕಳೂ ಕೂಡ ಶಾಲೆ ಬಿಟ್ಟು ಪಾಲಕರ ಜೊತೆ ತೆರಳಿದ್ದಾರೆ. ಗುಂಡ್ಲುಪೇಟೆಯು ಕೇರಳ ರಾಜ್ಯದ ಗಡಿ ಹಂಚಿಕೊಂಡಿದ್ದು, ಕರ್ನಾಟಕಕ್ಕಿಂತ ಅಲ್ಲಿ ದುಪ್ಪಟ್ಟು ಕೂಲಿ ಹಣ ಸಿಗುವ ಹಿನ್ನೆಲೆ ಅಣ್ಣೂರು, ಭೀಮನಬೀಡು, ಕೂತನೂರು, ಬೇರಂಬಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಕಳೆದ 1 ವಾರದಿಂದ ವಲಸೆ ಹೋಗುತ್ತಿದ್ದಾರೆ.
24 ವಿದ್ಯಾರ್ಥಿಗಳು ಡ್ರಾಪ್ಔಟ್: ಗುಂಡ್ಲುಪೇಟೆ ತಾಲೂಕಿನ ವಿವಿಧ ಗ್ರಾಮದ ಶಾಲೆಗಳಲ್ಲಿ 24 ಮಂದಿ ವಿದ್ಯಾರ್ಥಿಗಳು ಶಾಲೆ ತೊರೆದು ಪಾಲಕರ ಜೊತೆ ಹೊರಟ್ಟಿದ್ದು, ಕಡ್ಡಾಯ ಶಿಕ್ಷಣದಿಂದ ದೂರವಾಗಿದ್ದಾರೆ. 12 ಮಂದಿ ಬಾಲಕಿಯರು, 12 ಮಂದಿ ಬಾಲಕರು ಗುಳೆ ಹೊರಟ ಪಾಲಕರ ಜೊತೆ ತೆರಳಿದ್ದಾರೆಂದು ಶಿಕ್ಷಣ ಇಲಾಖೆ ಪಟ್ಟಿ ಮಾಡಿದೆ. ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ.
'ಶಾಲೆಗೆ ಮಕ್ಕಳನ್ನು ಕರೆತರುತ್ತೇವೆ':ಗುಳೆ ಹೊರಟ ಪಾಲಕರ ಜೊತೆ ಮಕ್ಕಳು ತೆರಳಿರುವ ಹಾಗೂ ತೆರಳುವ ವಿದ್ಯಾರ್ಥಿಗಳ ಪಟ್ಟಿ ತಯಾರಿಸಲಾಗಿದೆ. ಅವರನ್ನು ಮತ್ತೆ ಶಾಲೆಗೆ ಕರೆತರಲಾಗುವುದು. ಅಲ್ಲಿನ ಜಿಲ್ಲಾಧಿಕಾರಿ ಮತ್ತು ಕಾರ್ಮಿಕ ಅಧಿಕಾರಿಗಳಿಗೆ ಪತ್ರ ಕೂಡ ಬರೆಯಲಾಗುವುದು ಎಂದು ಗುಂಡ್ಲುಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್ ತಿಳಿಸಿದ್ದಾರೆ.
ಗ್ಯಾರಂಟಿ ನಡುವೆಯೂ ಗುಳೆ:ಸರ್ಕಾರದ ಗ್ಯಾರಂಟಿ ಯೋಜನೆಗಳು, ಉದ್ಯೋಗ ಖಾತ್ರಿ ಯೋಜನೆ ಇದ್ದರೂ ಹಲವು ಗ್ರಾಮಗಳ ಜನರು ಕೇರಳ ರಾಜ್ಯಕ್ಕೆ ಕೂಲಿಗಾಗಿ ಗುಳೆ ಹೊರಡುತ್ತಿದ್ದಾರೆ. ಗುಂಡ್ಲುಪೇಟೆ ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ನಿತ್ಯ ಕೇರಳ ಬಸ್ಗಾಗಿ ವೃದ್ಧರು, ಮಹಿಳೆಯರು ಪುರುಷರು ಕಾದು ಕುಳಿತುಕೊಳ್ಳುವುದು ಸಾಮಾನ್ಯವಾಗಿದೆ. ರೈತರು, ಬಡವರು ಕೂಲಿ ಕಾರ್ಮಿಕರು ಹಾಗೂ ಮಹಿಳೆಯರಿಗೆ ಸಣ್ಣ ಪ್ರಮಾಣದಲ್ಲಿ ನೆರವು ನೀಡುವಲ್ಲಿ ಗ್ಯಾರಂಟಿ ಯೋಜನೆಗಳು ಸ್ವಲ್ಪ ಪ್ರಮಾಣದಲ್ಲಿ ಆಸರೆಯಾದಂತೆ ಕಂಡು ಬಂದರೂ ಜನರು ಗುಳೆ ಹೋಗುವುದನ್ನು ತಪ್ಪಿಸಲು ಸಾಧ್ಯವಾಗದಿರುವುದು ವಿಪರ್ಯಾಸವಾಗಿದೆ.
ಇದನ್ನೂ ಓದಿ:ಮಾಸಲು ಬಟ್ಟೆ, ಹರಕಲು ಚಡ್ಡಿಯಲ್ಲಿ ಬರುವ ಬಡವರ ಕಣ್ಣೀರು ಒರೆಸಿ: ಅಧಿಕಾರಿಗಳಿಗೆ ಸಿಎಂ ಕರೆ