ಚಾಮರಾಜನಗರ: ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ನೂತನ ಕಾರ್ಯಕ್ರಮವಾದ ಗ್ರಾಮ ಸ್ವರಾಜ್ ಸಮಾವೇಶವು ಇಂದು ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆಯಲ್ಲಿ ನಡೆಯಿತು.
ಕೊಳ್ಳೇಗಾಲ, ಗುಂಡ್ಲುಪೇಟೆಯಲ್ಲಿ ಗ್ರಾಮ ಸ್ವರಾಜ್ ಸಮಾವೇಶ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಚಿವರಾದ ಆರ್.ಅಶೋಕ್, ಎಸ್.ಟಿ.ಸೋಮಶೇಖರ್, ಕೆ.ಎನ್.ಗೋಪಾಲಯ್ಯ ಹಾಗೂ ಸುರೇಶ್ ಕುಮಾರ್ ಪಾಲ್ಗೊಂಡು ಬಿಜೆಪಿ ಸ್ಥಳೀಯ ಮಟ್ಟದ ಪದಾಧಿಕಾರಿಗಳಲ್ಲಿ ರಣೋತ್ಸಾಹ ತುಂಬಿದರು. ಜೊತೆಗೆ ಶೇ. 80ರಷ್ಟು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಬೇಕೆಂದು ಗುರಿ ನೀಡಿದರು.
ಬಿ.ವೈ.ವಿಜಯೇಂದ್ರ ಮಾತನಾಡಿ, ಬಿಜೆಪಿಯು ಆರಂಭದಲ್ಲಿ ಬ್ರಾಹ್ಮಣರ ಪಕ್ಷ, ಲಿಂಗಾಯತರ ಪಕ್ಷ ಎನ್ನುತ್ತಿದ್ದರು. ಆದರೆ ಈಗ ಎಲ್ಲಾ ಸಮುದಾಯದವರನ್ನು, ಎಲ್ಲಾ ವರ್ಗವನ್ನು ಕೊಂಡೊಯ್ಯುವ ಏಕೈಕ ಪಕ್ಷ ನಮ್ಮ ಪಕ್ಷವಾಗಿದೆ. ಕಾಂಗ್ರೆಸ್, ಜೆಡಿಎಸ್ ಅವರಂತೆ ಒಂದು ಕಣ್ಣಿಗೆ ಸುಣ್ಣ ಮತ್ತೊಂದಕ್ಕೆ ಬೆಣ್ಣೆ ನೀಡುವುದಿಲ್ಲ ಕರ್ನಾಟಕದ ದೊಡ್ಡ ಶಕ್ತಿ ಯಡಿಯೂರಪ್ಪ ಎಂದರು. ಬಿಎಸ್ವೈ ಗುರಿ ಇಟ್ಟರೆ ಸುಮ್ಮನೆ ಕೂರಲ್ಲ ಎಂಬುದನ್ನು ವಿಪಕ್ಷದವರು ಚೆನ್ನಾಗಿ ಅರಿತುಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಈಗಿನ ಸರ್ಕಾರ ರಚನೆ ಎಂದರು.
ಬರಡು ಭೂಮಿಯಲ್ಲೂ ಕಮಲ ಅರಳಿಸುವ ಶಕ್ತಿ ಬಿಜೆಪಿಯದ್ದಾಗಿದ್ದು, ಅನುಕಂಪದ ಅಲೆಯ ನಡುವೆ ಶಿರಾದಲ್ಲಿ ಅಭಿವೃದ್ಧಿ ಪರವಾಗಿ ಬಿಜೆಪಿ ಗೆದ್ದಿದೆ ಎಂದು ವ್ಯಾಖ್ಯಾನಿಸಿದರು. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲಗೊಳ್ಳಬೇಕೆಂಬುದು ರಾಷ್ಟ್ರೀಯ ಅಧ್ಯಕ್ಷರ ಇಚ್ಛೆಯಾಗಿದೆ. ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಶೇ. 80ರಷ್ಟು ಗೆಲ್ಲಬೇಕು. ಕಾರ್ಯಕರ್ತರಿಗೆ ಬೆನ್ನೆಲುಬಾಗಿ ಮುಖಂಡರು ನಿಲ್ಲಬೇಕು ಎಂದು ಅವರು ಆಶಿಸಿದರು.
ಬಳಿಕ ಆರ್.ಅಶೋಕ್ ಮಾತನಾಡಿ, ಎಂಎಲ್ಎ, ಎಂಪಿ ಚುನಾವಣೆಗಳಿಂದ ಮಾತ್ರ ದೇಶ ಕಟ್ಟಲು ಸಾಧ್ಯವಿಲ್ಲ. ಸ್ಥಳೀಯ ಚುನಾವಣೆ ದೇಶ ಕಟ್ಟಲು ಪ್ರಮುಖ ಹೆಜ್ಜೆಯಾಗಿದೆ. ಸ್ಥಳೀಯ ಮಟ್ಟದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗದಿದ್ದ ಪರಿಣಾಮ ರಾಜ್ಯದಲ್ಲಿ ಬಿಜೆಪಿ 120 ಸ್ಥಾನಗಳನ್ನು ಎಂದಿಗೂ ಗೆದ್ದಿಲ್ಲ. ಕೇವಲ 104 ವಿಧಾನಸಭೆಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿಗರು ಗೆಲುವು ಸಾಧಿಸಿದರೆ ಮುಂದಿನ ದಿನಗಳಲ್ಲಿ ಬಿಜೆಪಿ ರಾಜ್ಯದಲ್ಲಿ 120ಕ್ಕೂ ಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನು ಗೆದ್ದುಕೊಳ್ಳಲಿದೆ. ಹೀಗಾಗಿ ಪಕ್ಷದ ಕಾರ್ಯಕರ್ತರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗರನ್ನು ಗೆಲ್ಲಿಸಲು ಶ್ರಮ ಪಡಬೇಕಿದೆ ಎಂದು ಹೇಳಿದರು.
ಸ್ಥಳೀಯ ಮಟ್ಟಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ಕೇಂದ್ರ ಸರ್ಕಾರದ ಅನುದಾನವನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸ್ಥಳೀಯ ಮಟ್ಟದಲ್ಲಿ ಕೇಂದ್ರ ಸರ್ಕಾರದ ಅನುದಾನ ಸದ್ಬಳಕೆಯಾಗಬೇಕೆಂದರೆ ಸ್ಥಳೀಯ ಮಟ್ಟದ(ಗ್ರಾಮ ಪಂಚಾಯತಿ) ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬರಬೇಕಿದೆ ಎಂದು ಮುಖಂಡರಿಗೆ ಕರೆ ನೀಡಿದರು.