ಚಾಮರಾಜನಗರ:ಜಂಗಲ್ ಸಫಾರಿ ಎಂದರೆ ಬಂಡೀಪುರ ಎಂಬಷ್ಟರ ಮಟ್ಟಿಗೆ ಜನಪ್ರಿಯವಾಗಿರುವ ಬಂಡೀಪುರದಲ್ಲಿ ಇನ್ನು ಮುಂದೆ ಸಫಾರಿ ವಾಹನಗಳು ಬೇಕಾಬಿಟ್ಟಿ ಕಾಡು ಸುತ್ತುವಂತಿಲ್ಲ.
ಹೌದು, ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಫಾರಿ ವ್ಯಾನ್ ಮತ್ತು ಜಿಪ್ಸಿಗಳಿಗೆ ಜಿಪಿಎಸ್ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ಬೇಕಾಬಿಟ್ಟಿ ತಿರುಗಾಡುತ್ತಿದ್ದ ಸಫಾರಿ ವಾಹನಗಳಿಗೆ ಬ್ರೇಕ್ ಬಿದ್ದಂತಾಗಿದೆ.
ಬಂಡೀಪುರ ಸಫಾರಿ ವಾಹನಗಳಿಗೆ ಜಿಪಿಎಸ್ ಕಣ್ಗಾವಲು! 7 ವ್ಯಾನ್ ಹಾಗೂ 5 ಜಿಪ್ಸಿಗಳಿಗೆ ಜಿಪಿಎಸ್ ಅಳವಡಿಕೆಯಾಗುತ್ತಿದೆ. ಅಂದಾಜು ಒಂದು ವಾಹನ ಟ್ರಿಪ್ಗೆ 15 ಕಿ.ಮೀ. ಸಂಚರಿಸಲಿದ್ದು, ಬೇಕಾಬಿಟ್ಟಿ ವಾಹನ ಚಾಲನೆಯಾಗದಿರಲಿ ಹಾಗೂ ಇಲಾಖೆಗೆ ಮಾಹಿತಿ ಸಿಗುವಂತಿರಲಿ ಎಂಬ ಉದ್ದೇಶದಿಂದ ಈ ರೀತಿ ಮಾಡಲಾಗಿದೆ. ಜಂಗಲ್ ರೆಸಾರ್ಟ್ನವರಿಗೂ ಜಿಪಿಎಸ್ ಅಳವಡಿಸಿಕೊಳ್ಳಿ ಎಂದು ಸೂಚಿಸಿದ್ದು, ಮುಂದಿನ ದಿನಗಳಲ್ಲಿ ಅವರು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದು ಬಂಡೀಪುರ ಸಿಎಫ್ಒ ಬಾಲಚಂದ್ರ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಸಫಾರಿ ವಾಹನ ಸವಾರರಿಗೆ ಪ್ರತ್ಯೇಕ ಮಾರ್ಗಗಳನ್ನು ನೀಡಿರಲಾಗುತ್ತದೆ. ಒಂದು ಸ್ಥಳದಲ್ಲಿ ಹುಲಿ ಕಂಡ ಕೂಡಲೇ ಮೊಬೈಲ್ ಮೂಲಕ ಮಾತಾಡಿಕೊಂಡು ಎಲ್ಲಾ ವಾಹನಗಳು ಅಲ್ಲಿಗೆ ತೆರಳುತ್ತಿದ್ದು, ಪ್ರಾಣಿಗಳು ಕಾಣಲಿಲ್ಲವೆಂದು ಸಫಾರಿ ಜೋನ್ ಬಿಟ್ಟು ತೆರಳುತ್ತಿದ್ದಕ್ಕೆ ಜಿಪಿಎಸ್ ಅಳವಡಿಕೆಯಿಂದ ಬ್ರೇಕ್ ಬಿದ್ದಿದೆ.ಅರಣ್ಯ ಇಲಾಖೆಯಲ್ಲಿ ಶಿಸ್ತು ತರಲು ಜಿಪಿಎಸ್ ಅಳವಡಿಕೆ ಮಹತ್ವದ ಬೆಳವಣಿಗೆ ಎಂಬುದು ವನ್ಯ ಪ್ರೇಮಿಗಳ ಅಭಿಮತ.