ಚಾಮರಾಜನಗರ: ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲೂಕಿನ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಗೆ ಡಿ.22 ರ ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದ್ದು, ಜಿಲ್ಲಾಡಳಿತ ಸಜ್ಜುಗೊಂಡಿದೆ. ಮತಗಟ್ಟೆ ಅಧಿಕಾರಿಗಳು ತಮ್ಮ ತಮ್ಮ ಮತಕೇಂದ್ರಗಳಿಗೆ ತೆರಳಿದರು.
ಮೊದಲ ಹಂತದ ಗ್ರಾಪಂ ಚುನಾವಣೆ: ಮತಗಟ್ಟೆಗಳಿಗೆ ತೆರಳಿದ ಸಿಬ್ಬಂದಿಗಳು ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲ್ಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾಗಿರುವ ಮಸ್ಟರಿಂಗ್ ಕೇಂದ್ರದಿಂದ ಮತದಾನ ಸಾಮಗ್ರಿಗಳೊಂದಿಗೆ ಅಧಿಕಾರಿಗಳು ತೆರಳಿದರು. ಚುನಾವಣೆ ಕರ್ತವ್ಯಕ್ಕಾಗಿಯೇ ಚಾಮರಾಜನಗರ ತಾಲೂಕಿನಿಂದ 79 ಬಸ್ಸುಗಳು ಗುಂಡ್ಲುಪೇಟೆ ತಾಲೂಕಿನಿಂದ 41 ಸೇರಿದಂತೆ 100 ಕ್ಕೂ ಹೆಚ್ಚು ಬಸ್ಸುಗಳು ಮತಕೇಂದ್ರದ ಅಧಿಕಾರಿಗಳನ್ನು ಕರೆದೊಯ್ದವು.
ಮತದಾರರು ಮತದಾನ ಮಾಡಲು ನಿಗದಿ ಪಡಿಸಿರುವ 22 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಮತಗಟ್ಟೆ ಅಧಿಕಾರಿಗಳಿಗೆ ತೋರಿಸಿ ಮತದಾನ ಮಾಡಬಹುದಾಗಿದೆ. ಕೋವಿಡ್ ಸೋಂಕಿತರು ಹಾಗೂ ಶಂಕಿತರು ಮತದಾನ ಮಾಡಲು ಇಚ್ಚಿಸಿದಲ್ಲಿ ಅಗತ್ಯ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಸಂಬಂಧಪಟ್ಟ ಮತಗಟ್ಟೆಗಳಿಗೆ ಮತದಾನದ ಕೊನೆಯ ಒಂದು ಗಂಟೆ ಅವಧಿಯಲ್ಲಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ.
3,079 ಮಂದಿ ಕಣದಲ್ಲಿ: ಮೊದಲ ಹಂತದಲ್ಲಿ ನಡೆಯುವ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕು ವ್ಯಾಪ್ತಿಯ ಗ್ರಾಪಂ ಚುನಾವಣೆಯಲ್ಲಿ 1,241 ಸ್ಥಾನಗಳಿಗೆ 3,079 ಮಂದಿ ಕಣದಲ್ಲಿದ್ದಾರೆ. ಇವರಲ್ಲಿ 62 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚಾಮರಾಜನಗರದ 43 ಗ್ರಾಪಂಗಳ 742 ಸ್ಥಾನ, ಗುಂಡ್ಲುಪೇಟೆ ತಾಲೂಕಿನ 34 ಗ್ರಾಪಂಗಳ 499 ಸ್ಥಾನ ಸೇರಿ ಒಟ್ಟು 77 ಗ್ರಾಪಂಗಳ 1,241 ಸ್ಥಾನಗಳಿಗೆ 3705 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ 62 ನಾಮಪತ್ರ ತಿರಸ್ಕೃತಗೊಂಡರೆ 411 ಮಂದಿ ನಾಮಪತ್ರ ವಾಪಸ್ ಪಡೆದು ಕಣದಿಂದ ಹಿಂದೆ ಸರಿದಿದ್ದಾರೆ.