ಚಾಮರಾಜನಗರ: ಸೇವೆ ಮುಗಿದರು ಅದರ ನೆನಪು ಫಲಾನುಭವಿಗಳಲ್ಲಿ ಶಾಶ್ವತ ಎಂಬುದಕ್ಕೆ ಶಾಲೆಯ ಹೆಸರಿನಲ್ಲಿ ಗಿರಿಜನರು ನಿತ್ಯವೂ ಗಾಂಧಿ ಜಪ ಮಾಡುತ್ತಿರುವುದು ಉತ್ತಮ ನಿದರ್ಶನ.
ಹೌದು, ಚಾಮರಾಜನಗರ ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಗಿರಿಜನರು ಗಾಂಧಿ ಶಾಲೆ ಎಂತಲೇ ಕರೆಯುತ್ತಾರೆೆ. ಶಾಲೆಯಲ್ಲಿ ಓದುತ್ತಿರುವ ಮಗು ಕೂಡ ತನ್ನದು ಗಾಂಧಿ ಶಾಲೆ ಎಂತಲೇ ಹೇಳುವಷ್ಟರ ಮಟ್ಟಿಗೆ ಮಹಾತ್ಮ ಗಾಂಧೀಜಿಯ ಹೆಸರು ಈ ಶಾಲೆಗೆ ತಳುಕು ಹಾಕಿಕೊಂಡಿದೆ.
ಕಾರಣ ಏನು:
ಗಿರಿಜನ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕೆಂದು 1958ರಲ್ಲಿ ಗಾಂಧಿ ಸ್ಮಾರಕ ನಿಧಿ ಆದಿವಾಸಿ ಸೇವಾ ಕೇಂದ್ರ ಹಾಗೂ ಆಶ್ರಮ ಶಾಲೆಯನ್ನು ಸ್ಥಾಪಿಸಲಾಗಿತ್ತು. ಶೃಂಗೇರಿ ಮೂಲದ ಗಾಂಧಿವಾದಿ ಕೆ.ವಿ. ಬಾಲಕೃಷ್ಣ ಮತ್ತು ಅವರ ಪತ್ನಿ ಆದಿವಾಸಿಗಳನ್ನು ಅಕ್ಷರಸ್ಧರನ್ನಾಗಿ ಮಾಡುವ ಮೂಲಕ ಗಾಂಧಿ ತತ್ವ, ಸಿದ್ಧಾಂತಗಳನ್ನು ಕಾಡಿನ ಮಕ್ಕಳಲ್ಲಿ ಬಿತ್ತುವ ಕೆಲಸ ಮಾಡಿದ್ದರು.
ಬಿಳಿಗಿರಿರಂಗನ ಬೆಟ್ಟದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂತರದ ದಿನಗಳಲ್ಲಿ ಅಂತ್ಯೋದಯದಿಂದ ಸರ್ವೋದಯ ಎಂಬ ಸಿದ್ಧಾಂತಕ್ಕೆ ಅನುಗುಣವಾಗಿ ಈ ಆದಿವಾಸಿ ಸೇವಾ ಕೇಂದ್ರವನ್ನು ಮತ್ತು ಗಾಂಧಿ ಆಶ್ರಮ ಶಾಲೆಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರುವ ಸಲುವಾಗಿ 1970ರಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ತಗಡೂರು ರಾಮಚಂದ್ರರಾವ್, ಸರ್ದಾರ್, ಕೆ.ಎ. ವೆಂಕಟರಾಮಯ್ಯ, ಸಿ. ಗೋಪಾಲರಾವ್, ಯಳಂದೂರಿನ ವೈ.ಬಿ.ಪುಟ್ಟಸ್ವಾಮಿ, ಚಾಮರಾಜನಗರದ ಸಿ.ಪಿ. ಹುಚ್ಚೇಗೌಡ, ಕೆ.ಎಸ್. ನಾರಾಯಣಸ್ವಾಮಿ, ಕೆ.ಎಸ್. ಸೀತಾರಾಮಯ್ಯಂಗಾರ್, ಸುದರ್ಶನಯ್ಯಂಗಾರ್ ಹಲವು ವರ್ಷ ಇದರ ಉಸ್ತುವಾರಿ ವಹಿಸಿಕೊಂಡು ಬಂದಿದ್ದರು.ಬಳಿಕ ಕೆಲ ವರ್ಷಗಳಲ್ಲಿ ಸೇವಾ ಸಂಸ್ಧೆಗೆ ಬರುತ್ತಿದ್ದ ಅನುದಾನವೂ ಕಡಿಮೆಯಾಗಿ, ಸೇವಾ ಮನೋಭಾವವುಳ್ಳವರು ಇಲ್ಲದಂತಾಗಿ ಸರ್ಕಾರದ ನಿರ್ಲಕ್ಷ್ಯದ ಫಲವಾಗಿ ಸಾವಿರಾರು ಮಂದಿ ಗಿರಿಜನರ ಜ್ಞಾನ ದೀವಿಗೆ ಹೊತ್ತಿಸಿದ್ದ ಗಾಂಧಿ ಸೇವಾ ಆಶ್ರಮ ಇಂದು ನೆಲಕಚ್ಚಿದೆ. ಗಾಂಧಿ ಸೇವಾಶ್ರಮದ ಕುರುಹು ಇಲ್ಲದಂತಿರುವ ಸ್ಥಳದ ಪಕ್ಕದಲ್ಲೇ ಹಿರಿಯ ಪ್ರಾಥಮಿಕ ಶಾಲೆ ಆರಂಭವಾಗಿದ್ದು, ಸರ್ಕಾರಿ ಶಾಲೆಯೇ ಗಿರಿಜನರ ಬಾಯಲ್ಲಿ ಗಾಂಧಿ ಶಾಲೆಯಾಗಿ ಬದಲಾಗಿದೆ.
ಗಾಂಧಿ ಹೆಸರು ಶಾಶ್ವತವಾಗಲಿ:ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತಲಿನ ಯರಕನಗದ್ದೆ, ಯರಕನಗದ್ದೆ ಕಾಲೋನಿ, ಕಲ್ಯಾಣಿ ಪೋಡು, ಮಂಜಿಗುಂಡಿ ಪೋಡು, ಸೀಗೆಬೆಟ್ಟ ಪೋಡು ಮತ್ತು ಪುರಾಣಿ ಪೋಡಿನ ಜನರು, ಚಿಣ್ಣರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಗಾಂಧಿ ಶಾಲೆ ಎಂದೇ ಇಂದಿಗೂ ಕರೆಯುತ್ತಾರೆ. ಹೀಗಾಗಿ ಈ ಶಾಲೆಗಾದ್ರು ಮಹಾತ್ಮಗಾಂದಿ ಹೆಸರಿಟ್ಟರೆ ಗಾಂಧೀಜಿ ಹೆಸರು ಇಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ವಿಜಿಕೆಕೆ ಶಿಕ್ಷಕ ರಾಮಾಚಾರಿ ಅಭಿಪ್ರಾಯಪಡುತ್ತಾರೆ.ಅಕ್ಷರ ಜ್ಞಾನವಿಲ್ಲದೆ ಕಾಡಿನೊಳಗೆ ಕಮರಿ ಹೋಗುತ್ತಿದ್ದ ನೂರಾರು ಆದಿವಾಸಿ ಮಕ್ಕಳಲ್ಲಿ ಅಕ್ಷರ ಜ್ಞಾನ ಬಿತ್ತಿದ್ದ ಗಾಂಧೀಜಿ ಆಶ್ರಮ ಶಾಲೆಯನ್ನು ಸರ್ಕಾರ ಉಳಿಸುವತ್ತ ಮನಸು ಮಾಡಬೇಕಿದೆ.