ಕೊಳ್ಳೇಗಾಲ:ತನ್ನ ಮಾಲೀಕನ ಚಿನ್ನದ ಅಂಗಡಿಯಲ್ಲಿ ಸುಮಾರು 5 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪಟ್ಟಣ ಠಾಣೆ ಪೊಲೀಸರು ತಮಿಳುನಾಡಿನ ಹೊಸೂರಿನಲ್ಲಿ ಬಂಧಿಸಿದ್ದಾರೆ. ಹನೂರು ತಾಲೂಕಿನ ಶೆಟ್ಟಹಳ್ಳಿ ಗ್ರಾಮದ ಕಿರಣ್ ಬಂಧಿತ ಆರೋಪಿ.
ಕಿರಣ್ ಕೊಳ್ಳೇಗಾಲ ಪಟ್ಟಣದ ಬಸ್ ನಿಲ್ದಾಣದ ಸಮೀಪವಿರುವ ಶ್ರೀನಿಧಿ ಹೊಟೇಲ್ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡ್ತಿದ್ದ. ಹೋಟೆಲ್ ಮಾಲೀಕ ರಘುನಾಥನ್ಗೆ ನಂಬಿಕಸ್ಥ ಕೆಲಸಗಾರನೂ ಆಗಿದ್ದನಂತೆ. ರಘುನಾಥನ್ ಕನ್ನಿಕಾ ಜ್ಯುವೆಲರ್ಸ್ ಎಂಬ ಚಿನ್ನದಂಗಡಿ ಸಹ ನಡೆಸುತ್ತಾರೆ. ಲಾಕ್ಡೌನ್ ಸಮಯದಲ್ಲಿ ಸರ್ಕಾರ ಚಿನ್ನದ ಅಂಗಡಿ ತೆರೆಯುವುದನ್ನು ನಿಷೇಧಿಸಿದ್ದರಿಂದ ಬಾಗಿಲು ಬಂದ್ ಮಾಡಿ ಬೀಗದ ಕೀಯನ್ನು ರಘುನಾಥ್ ತಮ್ಮ ಶ್ರೀನಿಧಿ ಹೋಟೆಲ್ ಡ್ರಾದಲ್ಲಿ ಇಟ್ಟಿದ್ದರು.
ಹೋಟೆಲ್ ಕೆಲಸಗಾರನಾಗಿದ್ದ ಕಿರಣ್ ರಾತ್ರಿ ವೇಳೆ ಹೋಟೆಲ್ನಲ್ಲೇ ಮಲಗುತ್ತಿದ್ದ. ಈ ವೇಳೆ ಹೋಟೆಲ್ನ ಡ್ರಾನಲ್ಲಿಟ್ಟಿದ್ದ ಚಿನ್ನದ ಅಂಗಡಿ ಕೀಯನ್ನು ಕಳವು ಮಾಡಿ ಮಾಲೀಕನ ಚಿನ್ನದಂಗಡಿಗೆ ನುಗ್ಗಿ ಸುಮಾರು 5 ಲಕ್ಷ ಬೆಳೆ ಬಾಳುವ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದ.
ಲಾಕ್ಡೌನ್ ತೆರವಾಗಿದ್ದರಿಂದ ಅಂಗಡಿ ತೆರೆಯಲು ಚಿನ್ನದ ಅಂಗಡಿ ಕೀ ಯನ್ನು ಹುಡುಕಾಡಿದ್ದಾರೆ. ಕೀ ನಾಪತ್ತೆಯಾಗಿದ್ದನ್ನು ಕಂಡು ಗಾಬರಿಗೊಂಡ ರಘುನಾಥನ್ ಅನುಮಾನಗೊಂಡು ಬಾಗಿಲು ಒಡೆದು ನೋಡಿದಾಗ, ಸುಮಾರು 5 ಲಕ್ಷ ಬೆಳೆ ಬಾಳುವ ಚಿನ್ನಾಭರಣಗಳು ಕಳುವಾಗಿರುವುದು ಗೊತ್ತಾಗಿದೆ. ತಕ್ಷಣವೇ ಸಪ್ಲೈಯರ್ ಕಿರಣ್ ಮೊಬೈಲ್ಗೆ ಕರೆ ಮಾಡಿದರೆ ಸ್ವಿಚ್ ಆಫ್ ಬಂದಿದೆ. ಇದರಿಂದ ಸಂಶಯಗೊಂಡ ಮಾಲೀಕ ಕಿರಣ್ ವಿರುದ್ಧ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅಪರಾಧ ವಿಭಾಗದ ಪಿಎಸ್ಐ ಮಾದೇಗೌಡ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ವೇಳೆ ಆರೋಪಿ ಕಿರಣ್ ತಮಿಳುನಾಡಿನ ಹೊಸೂರಿನಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ದೊರಕಿದೆ. ಕೂಡಲೇ ತಮಿಳುನಾಡಿಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.