ಕರ್ನಾಟಕ

karnataka

ETV Bharat / state

5 ಲಕ್ಷ ಕೊಟ್ರೆ ವೋಟು: ಸದಸ್ಯರ ಆಡಿಯೋ ವೈರಲ್, ಅತಂತ್ರ ಸ್ಥಿತಿಯಲ್ಲಿ ಹನೂರು ಪ.ಪಂ - ಹನೂರು ಪಟ್ಟಣ ಪಂಚಾಯಿತಿ

ಹನೂರು ಪಟ್ಟಣ ಪಂಚಾಯಿತಿ ಇಬ್ಬರು ಸದಸ್ಯರು ಮಾತನಾಡಿಕೊಂಡಿದ್ದರೆನ್ನಲಾದ ಆಡಿಯೋ ಈಟಿವಿ ಭಾರತಕ್ಕೆ ಲಭ್ಯವಾಗಿದೆ. 11ನೇ ವಾರ್ಡ್​ನ ಕಾಂಗ್ರೆಸ್ ಸದಸ್ಯ ಸಂಪತ್‍ಕುಮಾರ್ ಮತ್ತು 13ನೇ ವಾರ್ಡಿನ ಜೆಡಿಎಸ್‍ ಸದಸ್ಯ ಮಹೇಶ್‍ಕುಮಾರ್ ಇವರಿಬ್ಬರು ಫೋನ್​​ನಲ್ಲಿ ಮಾತನಾಡಿರುವ ಆಡಿಯೋ ಇದಾಗಿದೆ ಎಂದು ಜನ ಹೇಳುತ್ತಿದ್ದಾರೆ.

commission secret matter leaked
ಕಮಿಷನ್ ರಹಸ್ಯ ಬಟಾಬಯಲು

By

Published : Jan 21, 2020, 2:30 PM IST

ಚಾಮರಾಜನಗರ: ಪ್ರಜಾಪ್ರಭುತ್ವ ವ್ಯವಸ್ಥೆಗೆ ಜನಪ್ರತಿನಿಧಿಗಳಾದವರು ಹೇಗೆ ಕೊಳ್ಳಿ ಇಡುತ್ತಾರೆ ಎಂಬುದಕ್ಕೆ ಈ ಆಡಿಯೋ ತಾಜಾ ನಿದರ್ಶನವಾಗಿದೆ. ಹನೂರು ಪಟ್ಟಣ ಪಂಚಾಯಿತಿ ಇಬ್ಬರು ಸದಸ್ಯರು ಮಾತನಾಡಿಕೊಂಡಿದ್ದರೆನ್ನಲಾದ ಆಡಿಯೋ ಈಟಿವಿ ಭಾರತಕ್ಕೆ ಲಭ್ಯವಾಗಿದ್ದು, ಚುನಾವಣೆಯನ್ನೇ ಗುಮಾನಿಯಿಂದ ನೋಡುವ ಪರಿಸ್ಥಿತಿ ಸೃಷ್ಟಿಸಿದೆ.

11ನೇ ವಾರ್ಡ್​ನ ಕಾಂಗ್ರೆಸ್ ಸದಸ್ಯ ಸಂಪತ್‍ಕುಮಾರ್ ಮತ್ತು 13ನೇ ವಾರ್ಡಿನ ಜೆಡಿಎಸ್‍ ಸದಸ್ಯ ಮಹೇಶ್‍ಕುಮಾರ್ ಇವರಿಬ್ಬರು ಫೋನ್​​ನಲ್ಲಿ ಮಾತನಾಡಿರುವ ಆಡಿಯೋ ಇದಾಗಿದೆ ಎಂದು ತಿಳಿದುಬಂದಿದೆ. ಪಟ್ಟಣ ಪಂಚಾಯಯಿತಿ ಅಧ್ಯಕ್ಷ ಗಾದಿ ಹಿಡಿಯುವವರು ತಮಗೆ 5 ಲಕ್ಷ ರೂ. ಕೊಟ್ಟರೆ ಮಾತ್ರ ವೋಟು ಹಾಕೋಣ ಎಂದು ಒಬ್ಬರಿಗೊಬ್ಬರು ಲೆಕ್ಕಾಚಾರ ಹಾಕಿಕೊಂಡಿದ್ದಾರೆ.

ಇಬ್ಬರೂ ಬರೋಬ್ಬರಿ 20 ನಿಮಿಷ ಫೋನಿನಲ್ಲಿ ಮಾತನಾಡಿದ್ದು ಹನೂರು ಪ.ಪಂ ಅಧ್ಯಕ್ಷಗಾದಿ ಮೀಸಲಾತಿಯನ್ನು ಶಾಸಕ ಆರ್. ನರೇಂದ್ರ ಮನಸ್ಸು ಮಾಡಿದರೆ ಬದಲಾಯಿಸಬಹುದು. ಆದರೆ ಸಾಮಾನ್ಯ ಕೆಟಗಿರಿ ಇರುವುದರಿಂದಲೇ ನಮಗೆ ಹಣ ಸಿಗಲಿದೆ ಎಂದು ಇಬ್ಬರೂ ಮಾತನಾಡಿಕೊಂಡಿದ್ದಾರೆ.

ಕಮಿಷನ್ ರಹಸ್ಯ ಬಟಾಬಯಲು

ಚುನಾವಣೆಗೆ ಬರೋಬ್ಬರಿ 23 ಲಕ್ಷ ಖರ್ಚು ಮಾಡಿದ್ದೇನೆಂದು ಜೆಡಿಎಸ್ ಸದಸ್ಯ ಹೇಳಿಕೊಂಡಿದ್ದಕ್ಕೆ ಹನೂರು ಹೊಸ ತಾಲೂಕು ಕೇಂದ್ರವಾಗಿರುವುದರಿಂದ 100 ಕೋಟಿ ಅನುದಾನ ಬರಲಿದೆ, ಅಧ್ಯಕ್ಷ- ಉಪಾಧ್ಯಕ್ಷರು ಶೇ.5 ರಷ್ಟು ಕಮಿಷನ್ ಪಡೆದರೆ ನಮಗೂ ಶೇ.2 ಕಮಿಷನ್ ಕೊಡಬೇಕೆಂದು ಮೊದಲೇ ತಿಳಿಸಿಬಿಡೋಣ ಎಂದು ಕಾಂಗ್ರೆಸ್ ಸದಸ್ಯ ಹೇಳಿದ್ದಾರೆ.

ಕಾಂಗ್ರೆಸ್ ಸದಸ್ಯ ಸಂಪತ್ ಕುಮಾರ್ ತನ್ನ ವಾರ್ಡಿನಲ್ಲಿ ಈಗಾಗಲೇ 3.5ಕೋಟಿ ವೆಚ್ಚದ ಕಾಮಗಾರಿ ನಡೆದರೆ ಶೇ.5 ಕಮಿಷನ್ ಎಂದರೂ 15ಲಕ್ಷಕ್ಕೂ ಹೆಚ್ಚು ಹಣ ಬರುತ್ತದೆ ಎಂದು ತಿಳಿಸಿರುವುದು ಚುನಾವಣೆ ಎಂಬುದು ವ್ಯಾಪಾರವಾಗಿದೆಯೇ ಎಂಬ ಅನುಮಾನ ಸ್ಥಳೀಯರಲ್ಲಿ ಹುಟ್ಟುಹಾಕಿದೆ.

ಇನ್ನು, ಚುನಾವಣೆ ಸಮೀಪವಾದಾಗ ಪಕ್ಷವು ರೆಸಾರ್ಟ್ ನಲ್ಲಿಡಲು ಪ್ಲಾನ್ ಮಾಡಿದೆ ಎಂದು ಜೆಡಿಎಸ್ ಸದಸ್ಯ ಮಹೇಶ್ ಕುಮಾರ್ ಹೇಳಿದ್ದಕ್ಕೆ ರೆಸಾರ್ಟ್​ನಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಸಿಗಲಿದೆ. ರೆಸಾರ್ಟ್ ರಾಜಕಾರಣ ಎಂಬುದು ನಿನಗೆ ಗೊತ್ತಿಲ್ಲವೇ ಎಂದು ನಗೆ ಚಟಾಕಿಯನ್ನೂ ಹಾರಿಸಿದ್ದಾರೆ.

ದಿನಾಂಕ ನಿಗದಿಗೂ ಮುನ್ನವೇ ಲೆಕ್ಕಾಚಾರ:

ಹನೂರು ಪಟ್ಟಣ ಪಂಚಾಯಿತಿಯು ಈ ಬಾರಿ ಅತಂತ್ರವಾಗಿದ್ದು ಜೆಡಿಎಸ್ 6 ಸ್ಥಾನ, ಕಾಂಗ್ರೆಸ್ 5 ಹಾಗೂ ಬಿಜೆಪಿಯು 2 ವಾರ್ಡ್​ಗಳಲ್ಲಿ ಗೆದ್ದಿದೆ‌. ಮೀಸಲಾತಿ ವಿಂಗಡನೆ ನ್ಯಾಯಾಲಯದಲ್ಲಿರುವುದರಿಂದ ಆಡಳಿತ ಮಂಡಳಿಯ ರಚನೆ ಮತ್ತು ಅಧ್ಯಕ್ಷ ಚುನಾವಣೆ ನನೆಗುದಿಗೆ ಬಿದ್ದಿದೆ. ಆದರೆ ಹನೂರು ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ 3 ಪಕ್ಷದಿಂದ ಯಾರೇ ಸ್ಫರ್ಧಿಸಿದರೂ ಪ್ರತಿ ಸದಸ್ಯನಿಗೆ 5 ಲಕ್ಷ ನೀಡುವವರಿಗೆ ಮತ ಎಂಬ ಇವರ ಮಾತು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಚುನಾವಣಾ ಆಯೋಗಕ್ಕೆ ದೂರು:

ವಾರ್ಡ್ ಚುನಾವಣೆಗೆ 23 ಲಕ್ಷ ಖರ್ಚು ಮಾಡಿದ್ದೇನೆ, 4 ಲಕ್ಷ ರೂ. ಮೌಲ್ಯದ ಮದ್ಯವನ್ನು ಕೆಲ ವಾರ್ಡ್​ನಲ್ಲಿ ಹಂಚಲಾಗಿದೆ ಎಂಬ ಇವರಿಬ್ಬರ ಮಾತುಗಳು ವೈರಲ್ ಆಗಿರುವುದರಿಂದ ಜನರೇ ಇವರಿಬ್ಬರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲು ಮುಂದಾಗಿದ್ದು, ಈ ಆಡಿಯೋ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ.

ABOUT THE AUTHOR

...view details