ಚಾಮರಾಜನಗರ: 200 ಯೂನಿಟ್ ಉಚಿತ ವಿದ್ಯುತ್, ಮನೆಯ ಮಹಿಳಾ ಯಜಮಾನಿಗೆ 2 ಸಾವಿರ ಹಣ ನೀಡುವ ಪ್ರಣಾಳಿಕೆಯ ಜೊತೆಗೆ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೊಸದೊಂದು ಘೋಷಣೆ ಮಾಡಿ ಮತ ಸೆಳೆಯುವ ಕಸರತ್ತು ನಡೆಸಿದರು. ಹನೂರಿನಲ್ಲಿ ಪ್ರಜಾಧ್ವನಿ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, "ತಾಲೂಕಿನಲ್ಲಿ ಅತಿ ಹೆಚ್ಚು ನೋಂದಣಿ ಮಾಡಿದ 10 ಮಂದಿಗೆ ವೈಯಕ್ತಿಕವಾಗಿ ಬೊಂಬಾಟ್ ಟಿವಿ ಗಿಫ್ಟ್ ನೀಡುತ್ತೇನೆ. ಪಕ್ಷ ಯಾವುದೇ ಇರಲಿ, ಎಲ್ಲರ ಮನೆ ಬಾಗಿಲಿಗೆ ತೆರಳಿ ಕಾಂಗ್ರೆಸ್ ಪ್ರಣಾಳಿಕೆಯನ್ನು ತಿಳಿಸಿ" ಎಂದರು.
"ಹೊರಗಿನಿಂದ ಬಂದಿರುವ ಕೆಲವರು ಕ್ಷೇತ್ರದ ಜನರಿಗೆ ಹಣ ಸೇರಿದಂತೆ ಮತ್ತಿತರ ಆಮಿಷ ತೋರಿಸುತ್ತಿದ್ದಾರೆ" ಎಂದು ಶಾಸಕ ನರೇಂದ್ರ ಹೇಳಿದರು. "ಬಿಜೆಪಿ ಅವರಾಗಲೀ, ಜೆಡಿಎಸ್‌ನವರಾಗಲೀ ಯಾರೇ ಆಗಲೀ ದುಡ್ಡು ಕೊಟ್ಟರೆ ಇಸ್ಕೊಳಿ ಓಟ್ ಮಾತ್ರ ಕಾಂಗ್ರೆಸ್‌ಗೆ ಹಾಕಿ" ಎಂದು ಹೇಳಿದರು.
ಪೊಲೀಸರಿಗೆ ಡಿಕೆಶಿ ಎಚ್ಚರಿಕೆ: ಸಚಿವ ಅಶ್ವಥ್ ನಾರಾಯಣ್ ಎಲ್ಲಿ ಕೊಲೆ ಪ್ರಚೋದನೆ ಹೇಳಿಕೆ ಕೊಟ್ಟರೋ ಅಲ್ಲಿಯೇ ಕೇಸ್ ದಾಖಲಿಸಿ, ಅವರನ್ನು ಬಂಧಿಸಬೇಕು ಎಂದು ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು. ಒಬ್ಬ ಮಂತ್ರಿಯಾಗಿ ಮಾಜಿ ಸಿಎಂ ಕೊಲೆಗೆ ಪ್ರಚೋದನೆ ಕೊಟ್ಟಿದ್ದಾರೆ. ಕ್ಷಮಾಪಣೆ ಕೇಳುವುದೆಲ್ಲ ಬೇಡ, ಭಾರತದ ಕಾನೂನನ್ನು ಸರ್ಕಾರ ಪ್ರಯೋಗಿಸಲಿ ಎಂದರು.