ಗುಂಡ್ಲುಪೇಟೆ :ಸರ್ಕಾರದ ಜೊತೆ ಸಮಾಲೋಚನೆ ನಡೆಸಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಶಾಸಕ ಸಿ ಎಸ್ ನಿರಂಜನ ಕುಮಾರ್ ಶೀಘ್ರವಾಗಿ ಮಾಡಬೇಕೆಂದು ಮಾಜಿ ಸಚಿವರು ಹಾಗೂ ಗುಂಡ್ಲುಪೇಟೆ ಮಾಜಿ ಶಾಸಕರಾದ ಗೀತಾ ಮಹದೇವಪ್ರಸಾದ್ ಒತ್ತಾಯಿಸಿದರು.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರೋ ಅವರು, ಪ್ರಸ್ತುತ ಕೊಡಗು-ಕೇರಳದಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆ ಕಬಿನಿ ಮತ್ತು ಕೆಆರ್‌ಎಸ್ ಜಲಾಶಯಗಳು ತುಂಬುವ ಹಂತ ತಲುಪಿದೆ. ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ. ಇದರಲ್ಲಿ ಸ್ವಲ್ಪ ಮಟ್ಟದ ನೀರನ್ನು ತಾಲೂಕಿನ ಕೆರೆಗಳಿಗೆ ಹರಿಸಿದರೆ ರೈತರಿಗೆ ಕೃಷಿ ಮಾಡಲು ಅನುಕೂಲವಾಗುವ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚುತ್ತದೆ ಎಂದು ತಿಳಿಸಿದರು.
ಕೊರೊನಾ ಸಂದರ್ಭದಲ್ಲಿ ತಾಲೂಕಿನ ಬಹುತೇಕ ರೈತರು ಮರಳಿ ಗ್ರಾಮಗಳತ್ತ ಧಾವಿಸಿದ್ದು, ಈ ಸಂದರ್ಭದಲ್ಲಿ ನೀರು ಇದ್ದರೆ ಕೃಷಿ ಚಟುವಟಿಕೆಯಲ್ಲಿ ಹೆಚ್ಚಿನ ಮಂದಿ ತೊಡಗಿಕೊಳ್ಳುತ್ತಾರೆ. ಜೊತೆಗೆ ಮುಂದಿನ ದಿನಗಳಲ್ಲಿ ಅವರು ಕೃಷಿಯನ್ನೇ ಅವಲಂಬಿಸುವ ಸಾಧ್ಯತೆಗಳಿವೆ. ಇದನ್ನು ಮನಗಂಡು ತಮ್ಮದೇ(ಶಾಸಕ ನಿರಂಜನ ಕುಮಾರ್) ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವರ ಜೊತೆ ಸಮಾಲೋಚನೆ ನಡೆಸಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮಾಜಿ ಸಚಿವರಾದ ಹೆಚ್ ಎಸ್ ಮಹದೇವಪ್ರಸಾದ್ ಅವರ ಕನಸಾಗಿದ್ದು, ಇದು ಕಾರ್ಯರೂಪಕ್ಕೆ ಬರುವವರೆಗೂ ಶ್ರಮಿಸುತ್ತೇವೆ, ಜೊತೆಗೆ ಅದನ್ನು ಮುಂದುವರಿಸುತ್ತೇವೆ. ಈ ವಿಚಾರದ ಬಗ್ಗೆ ಕಾಂಗ್ರೆಸ್ ಯುವ ಮುಖಂಡ ಗಣೇಶ್ ಪ್ರಸಾದ್ ಕೂಡಾ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಸಮಸ್ಯೆಗಳ ಕುರಿತು ಮನವರಿಕೆ ಮಾಡಿದ್ದಾರೆ.
ಗುಂಡ್ಲುಪೇಟೆ ಕೆರೆಗಳಿಗೆ ನೀರು ತುಂಬಿಸಲು ಮಾಜಿ ಸಚಿವೆ ಡಾ.ಗೀತಾ ಮಹದೇವಪ್ರಸಾದ್ ಒತ್ತಾಯ! - ಗುಂಡ್ಲುಪೇಟೆ ಚಾಮರಾಜನಗರ ಲೆಟೆಸ್ಟ್ ನ್ಯೂಸ್
ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮಾಜಿ ಸಚಿವರಾದ ಹೆಚ್ ಎಸ್ ಮಹದೇವಪ್ರಸಾದ್ ಅವರ ಕನಸಾಗಿದ್ದು, ಇದು ಕಾರ್ಯರೂಪಕ್ಕೆ ಬರುವವರೆಗೂ ಶ್ರಮಿಸುತ್ತೇವೆ, ಜೊತೆಗೆ ಅದನ್ನು ಮುಂದುವರಿಸುತ್ತೇವೆ..
ಸಿದ್ದರಾಮಯ್ಯ ಅವರೂ ಈ ಬಗ್ಗೆ ಸಕರಾತ್ಮಕವಾಗಿ ಸ್ಪಂದಿಸಿದ್ದು, ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆ ಕ್ಷೇತ್ರದ ಶಾಸಕ ನಿರಂಜನಕುಮಾರ್ ಹೆಚ್ಚಿನ ಶ್ರಮವಹಿಸಿ ಕೆರೆಗಳಿಗೆ ನೀರು ತುಂಬಿಸಲು ಮುಂದೆ ಬರಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ತಾಲೂಕಿನ ವಡ್ಡಗೆರೆ ಕೆರೆಗೆ ನೀರು ತುಂಬಿಸುವ ಕೆಲಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್ ಹಾಗೂ ಶಾಸಕ ನಿರಂಜನ ಕುಮಾರ್ ಚಾಲನೆ ನೀಡಿದ್ದರು. ಮಳೆ ನೀರು ಅಭಾವದಿಂದ ಅದು ಅರ್ಧಕ್ಕೆ ನಿಂತು ಹೋಗಿತ್ತು. ಪ್ರಸ್ತುತ ಕಬಿನಿ-ಕೆಆರ್‌ಎಸ್ ಜಲಾಶಯಗಳು ತುಂಬಿದೆ. ಆ ಮೂಲಕ ತಾಲೂಕಿನ ಎಲ್ಲಾ ಕೆರೆಗಳಿಗೂ ನೀರು ಹರಿಸುವ ಕೆಲಸ ಮಾಡಬೇಕೆಂದು ಹೇಳಿದರು.