ಕೊಳ್ಳೇಗಾಲ (ಚಾಮರಾಜನಗರ):ಅಕ್ರಮ ಸಾಗಾಟ ಆಗುತ್ತಿದ್ದ ಕೆಜಿಗಟ್ಟಲೆ ತಿಮಿಂಗಲ ವಾಂತಿ (ಅಂಬರ್ ಗ್ರೀಸ್) ವಶಪಡಿಸಿಕೊಂಡಿರುವ ಘಟನೆ ಕೊಳ್ಳೇಗಾಲ ಬಸ್ ನಿಲ್ದಾಣ ಸಮೀಪ ನಡೆದಿದೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಅಲ್ಲಮಜ್ಜಿ ರಸ್ತೆಯ ಕೆ.ಬಿ.ವಿರೂಪಾಕ್ಷ (62), ಕೇರಳ ಮೂಲದ ಶಂಸುದ್ಧೀನ್ ಒತಿಯೋತ್ (48), ತ್ರೆಸೀಮಾ ವರ್ಘಸೆ @ ಸುಜಾ (55) ಹಾಗೂ ಸಜಿ ಸುಬಾಸ್ (41) ಬಂಧಿತರು.
ಆರೋಪಿಗಳು ಬೆಂಗಳೂರಿನ ಕಡೆಯ ಕಾಳಸಂತೆಯಲ್ಲಿ ಮಾರಾಟ ಮಾಡುವ ಸಲುವಾಗಿ ಕಾರಿನಲ್ಲಿ ಅಂಬರ್ ಗ್ರಿಸ್ (ತಿಮಿಂಗಿಲ ವಾಂತಿ) ಸಾಗಿಸುತ್ತಿದ್ದರು. ಈ ವಿಷಯ ಖಚಿತಪಡಿಸಿಕೊಂಡ ಅರಣ್ಯ ಸಂಚಾರಿ ದಳದ ಪೊಲೀಸರು ಕೊಳ್ಳೇಗಾಲದ ಬಸ್ ನಿಲ್ದಾಣ ಸಮೀಪ ಮಾಲುಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 14 ಕೆ.ಜಿ 950 ಗ್ರಾಂ ಅಂಬರ್ ಗ್ರಿಸ್ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.
ಮಹಿಳೆಗೆ ಆಟೋ ಡಿಕ್ಕಿ:ಕೂಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಹಿಂಬದಿಯಿಂದ ಗೂಡ್ಸ್ ಆಟೋ ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಹೊಸದೊಡ್ಡಿ ಗ್ರಾಮದಲ್ಲಿ ನಡೆದಿದೆ. ಹನೂರು ತಾಲೂಕಿನ ಚಿಕ್ಕಾಲತ್ತೂರು ಗ್ರಾಮದ ಚಿತ್ರ (45) ಮೃತಪಟ್ಟ ಮಹಿಳೆ. ಜಮೀನಿನಲ್ಲಿ ಕೂಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಹೊಸದೊಡ್ಡಿ ಗ್ರಾಮದ ಸಮೀಪ ಗೂಡ್ಸ್ ಆಟೋ ಬಂದು ಹಿಂಬದಿಯಿಂದ ಡಿಕ್ಕಿ ಹೊಡೆದು ಮಹಿಳೆ ತೀವ್ರವಾಗಿ ಗಾಯಗೊಂಡು ಅಸುನೀಗಿದ್ದಾರೆ. ಸುದ್ದಿ ತಿಳಿದ ರಾಮಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.