ಚಾಮರಾಜನಗರ: ರಾಜಾಹುಲಿ ಅಂದರೆ ಗುಡುಗಬೇಕು, ಘರ್ಜಿಸಬೇಕು. ಆದರೆ, ಸಿಎಂ ಯಡಿಯೂರಪ್ಪ ಹಲ್ಲಿಲ್ಲದ-ಸ್ವರವಿಲ್ಲದ ಹುಲಿ ಎಂದು ಮಾಜಿ ಸಂಸದ ಆರ್ ಧ್ರುವ ನಾರಾಯಣ ವ್ಯಂಗ್ಯವಾಡಿದರು.
ಮಾಜಿ ಸಂಸದ ಆರ್ ಧ್ರುವ ನಾರಾಯಣ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಸಮಸ್ಯೆಗಳ ಬಗ್ಗೆ ನೆಲ, ಜಲ, ಭಾಷೆಗಳ ಬಗ್ಗೆ ಗುಡುಗಬೇಕು. ಆದರೆ, ಗುಡುಗು ಇಲ್ಲ, ಸಿಡಿಲೂ ಇಲ್ಲ, ಘರ್ಜನೆಯೂ ಇಲ್ಲ. ಕೋವಿಡ್ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನಿತ್ಯ ಸಾವಿರಾರು ಜನ ಸಾಯುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ರಾಜ್ಯಕ್ಕೆ ಕೊಡಬೇಕಾದ ಜಿಎಸ್ಟಿ ಪಾಲು ಕೊಡದೇ ಸಾಲ ಮಾಡಿ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಯಡಿಯೂರಪ್ಪ ಅವರೂ ಮರು ಮಾತನಾಡಿಲ್ಲ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ವಿಚಾರದಲ್ಲಿ ನಾಚಿಕೆಯಾಗಬೇಕು. ಕೊಡಬೇಕಾದ ಹಣ ಕೊಡದೇ ರಾಜ್ಯಕ್ಕೆ ನ್ಯಾಯ ಒದಗಿಸುವಲ್ಲಿ ಸೋತಿದ್ದಾರೆ ಎಂದರು.
ಯಡಿಯೂರಪ್ಪ ಸರ್ಕಾರ ಶೀಘ್ರ ಪತನ:ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರ ಮೊಮ್ಮಕ್ಕಳು ಭ್ರಷ್ಟಾಚಾರದಲ್ಲಿ ತೊಡಗಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವುದರಲ್ಲಿ ಆಶ್ಚರ್ಯವಿಲ್ಲ. ಈ ಹಿಂದೆ ಸಿಎಂ ಜೈಲಿಗೆ ಹೋಗಿದ್ದರು. ಈಗ, 2ನೇ ಅಧ್ಯಾಯ ಆರಂಭವಾಗಿದೆ. ಯಡಿಯೂರಪ್ಪ ಅಧಿಕಾರ ಕಳೆದುಕೊಂಡರೆ ಅದಕ್ಕೆ ವಿಜಯೇಂದ್ರ ಅವರೇ ಕಾರಣ ಎಂದು ಅಭಿಪ್ರಾಯಪಟ್ಟರು.