ಚಾಮರಾಜನಗರ : ನನ್ನ ಸೋಲಿಗೆ ಪಕ್ಷದ ಕೆಲ ಮುಖಂಡರೇ ಕಾರಣ ಎಂದು ಮಾಜಿ ಸಚಿವ ವಿ ಸೋಮಣ್ಣ ಆರೋಪಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಚಾಮರಾಜನಗರಕ್ಕೆ ಆಗಮಿಸಿ ಕಾರ್ಯಕರ್ತರ ಕೃತಜ್ಞತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನ್ನ ಸೋಲಿಗೆ ಪಕ್ಷದ ಕೆಲ ಮುಖಂಡರೇ ಕಾರಣ. ನನಗೆ ಮಾಡಿದ ಪಾಪದ ಕೆಲಸ ಬೇರೆ ಯಾರಿಗೂ ಮಾಡುವುದು ಬೇಡ. ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಚಪ್ಪಲಿಯಲ್ಲಿ ಹೊಡಿಬೇಕು ಎಂದು ಕಿಡಿಕಾರಿದರು.
ಕೆಲವರು ಮಾತ್ರ ಇಂತಹ ಪಾಪದ ಕೆಲಸ ಮಾಡಿದ್ದಾರೆ. 7ರಿಂದ 8 ಮಂದಿಯಿಂದ ನನಗೆ ಸೋಲುಂಟಾಯಿತು. ನನ್ನ ಸಮಾಜದವರೇ ನನಗೆ ಕೈ ಕೊಟ್ಟರು. ಕೆಲ ಬೋರ್ಡ್ ಅಧ್ಯಕ್ಷರು ಮಠಗಳಿಗೆ ದುಡ್ಡು ಕೊಟ್ಟು ಜನರ ದಿಕ್ಕು ತಪ್ಪಿಸಿದರು ಎಂದು ಬಿಜೆಪಿ ಮುಖಂಡರ ವಿರುದ್ಧ ಆರೋಪ ಮಾಡಿದರು.
ಈಗ ಅವರು ಒಳೇಟು ಕೊಟ್ಟರು, ಇವರು ಒಳೇಟು ಕೊಟ್ಟರು, ಕ್ರಮ ಕೈಗೊಳ್ಳಿ ಎನ್ನುತ್ತಿದ್ದೀರಿ, ಈ ಕೆಲಸವನ್ನು ಕಳೆದ 6 ತಿಂಗಳ ಹಿಂದೆಯೇ ಮಾಡಬೇಕಿತ್ತು. ಆಗ ಮಾಡಲಿಲ್ಲ. ಈಗ ಮಾಡಿ ಎನ್ನುತ್ತಿದ್ದೀರಿ, ನಾನು ನಿಮ್ಮನ್ನು ನಂಬಿಕೊಂಡಿದ್ದೆ ತಪ್ಪಾಯಿತು ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಮಾದೇಶ್ವರನ ಆಣೆ. ನನ್ನ ಮಕ್ಕಳಾಣೆ ನಾನಾಗಿ ಇಲ್ಲಿಗೆ ಬರಲಿಲ್ಲ. ಹೈಕಮಾಂಡ್ ಹೇಳಿದ್ದರಿಂದ ಚಿನ್ನದಂತಹ ಗೋವಿಂದರಾಜ ನಗರ ಕ್ಷೇತ್ರ ಬಿಟ್ಟು ಇಲ್ಲಿಗೆ ಚಾಮರಾಜನಗರಕ್ಕೆ ಬಂದೆ. ಪಕ್ಷವನ್ನು ತಾಯಿಗೆ ಸಮಾನ ಎಂದು ಹೇಳುತ್ತೇವೆ. ಪಕ್ಷ ಒಳಗೇ ಇದ್ದು ದ್ರೋಹ ಬಗೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣಪ್ರಸಾದ್ ಅವರಿಗೆ ನೈತಿಕತೆ ಇದ್ದರೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರನ್ನು ಪಕ್ಷದಿಂದ ಹೊರಹಾಕಿ ಎಂದು ಆಗ್ರಹಿಸಿದರು. ಕೆಲವರು ಮನಸ್ಸು ಬಿಚ್ಚಿ ಮುಕ್ತ ಮನಸ್ಸಿನಿಂದ ಕೆಲಸ ಮಾಡಲಿಲ್ಲ. ದೊಡ್ಡ ಸ್ಥಾನಕ್ಕೆ ಸೋಮಣ್ಣ ಹೋಗುತ್ತಾರೆ ಎಂದಿದ್ದೆ ಮುಳುವಾಯಿತು ಎಂದು ಪಕ್ಷದ ಕೆಲ ಮುಖಂಡರ ವಿರುದ್ಧ ಬೇಸರ ವ್ಯಕ್ತಪಡಿಸಿದರು.