ಚಾಮರಾಜನಗರ:ಈಗಾಗಲೇ ಸಿದ್ದರಾಮಯ್ಯ, ಡಿಕೆಶಿ ಸಿಎಂ ಕನಸು ಕಾಣುತ್ತಿದ್ದಾರೆ. ಆದರೆ, ದಲಿತರು ಯಾವಾಗ ಮುಖ್ಯಮಂತ್ರಿ ಆಗೋದು ಎಂದು ಮಾಜಿ ಐಎಎಸ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಕೆ.ಶಿವರಾಂ ಆಕ್ರೋಶ ಹೊರಹಾಕಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ದಲಿತರ ಬಗ್ಗೆ ಕಾಳಜಿ ಇದ್ದರೆ ದಲಿತ ಸಿಎಂ ಅಭ್ಯರ್ಥಿ ಘೋಷಿಸಬೇಕು. 74 ವರ್ಷಗಳಾದರೂ ನಾನು ಸಿಎಂ, ನಾನು ಸಿಎಂ ಎಂದು ಇವರೇ ಹೇಳಿಕೊಂಡರೆ ದಲಿತರು ಯಾವಾಗ ಮುಖ್ಯಮಂತ್ರಿ ಆಗೋದು? ದಲಿತರು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಇದೇ ಕಾಂಗ್ರೆಸ್ನವರು ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದ ಪರಮೇಶ್ವರ್ ಅವರನ್ನು ಸೋಲಿಸಿದರು ಎಂದು ಕಿಡಿಕಾರಿದರು.
ಪ್ರತೀ ಬಾರಿ ಮತ ಹಾಕಿದರೂ ಬೇರೆಯವರೇ ಸಿಎಂ ಆಗಿದ್ದಾರೆ
ನಮ್ಮವರು ಜೀತದಾಳುಗಳ ರೀತಿ ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ ಪರ ದುಡಿದು ಮತ ಹಾಕುತ್ತಿದ್ದಾರೆ. ಆದರೆ, ದಲಿತರನ್ನು ಕೈ ಹಿಡಿದಿಲ್ಲ. ಮತ ಹಾಕುವುದು, ಬೇರೆಯವರು ಸಿಎಂ ಆಗುವುದನ್ನು ನೋಡುತ್ತಾ ಕುಳಿತುಕೊಳ್ಳುವುದು ಕೆಲಸವಾ? ಬಾಬಾ ಸಾಹೇಬ್ ಅಂಬೇಡ್ಕರ್ ಸ್ಮಾರಕಗಳನ್ನು ಮಾಡಿರುವುದು ಬಿಜೆಪಿ. ನಿಜವಾದ ಕೋಮುವಾದಿಗಳು ಕಾಂಗ್ರೆಸ್ನವರು ಎಂಬುದನ್ನು ನಮ್ಮವರು ಅರ್ಥ ಮಾಡಿಕೊಳ್ಳಬೇಕು ಎಂದು ಕೆ.ಶಿವರಾಂ ಹೇಳಿದರು.
ಆನೇಕಲ್ ಟಿಕೆಟ್ ಆಕಾಂಕ್ಷಿ:
ಕಳೆದ ಬಾರಿ ಚಾಮರಾಜನಗರ ಲೋಕಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಯಡಿಯೂರಪ್ಪ ಅವರು ಕೂಡ ಭರವಸೆ ಕೊಟ್ಟು ಕೆಲಸ ಮಾಡು ಹೋಗು ಎಂದು ಹೇಳಿ ಕಳುಹಿಸಿದ್ದರು. ಆದರೆ, ಅದಾದ ಬಳಿಕ ಕೈ ತಪ್ಪಿತು. ರಾಜ್ಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಬೇಕೆಂದು ಕೊಂಡಿದ್ದು ಆನೇಕಲ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾನೆ. ಅಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದರು.