ಚಾಮರಾಜನಗರ: ಅಕ್ಕಿ ಕೊಡದಿರುವ ನೀಚ ಬುದ್ಧಿ ನಮಗಿಲ್ಲ. ಆ ರೀತಿ ಚೀಪ್ ಪಾಲಿಟಿಕ್ಸ್ ಅನ್ನು ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಮಾಡುವುದಿಲ್ಲ. ಕರ್ನಾಟಕದ ಪ್ರತಿಯೊಬ್ಬರಿಗೂ ಅಕ್ಕಿ ಸಿಗಬೇಕೆಂಬುದು ನಾಯಕರ, ಕಾರ್ಯಕರ್ತರ ಆಶಯವಾಗಿದೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಹೇಳಿದರು. ಚಾಮರಾಜನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಇದೇ ವೇಳೆ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿ, ನನಗೆ ಬಿಜೆಪಿ ಸೋತಿದ್ದಕ್ಕೆ ಬೇಜಾರಿಲ್ಲ. ಆದರೆ, ಕಾಂಗ್ರೆಸ್ ಬಂದಿದ್ದಕ್ಕೆ ಹೆಚ್ಚು ಬೇಸರವಾಗಿದೆ ಎಂದರು. ಕರ್ನಾಟಕದ ದುರ್ದೈವದಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಎಂತೆಂಥ ಮಂತ್ರಿಗಳಿದ್ದಾರೆ, ಕಂಪ್ಯೂಟರ್ ಸರ್ವರ್ ಅನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ ಎನ್ನುತ್ತಾರೆ ಎಂದು ಲೇವಡಿ ಮಾಡಿದರು.
ಕುಣಿಯಲಾರದವ ನೆಲ ಡೊಂಕು ಎನ್ನುವ ರೀತಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನವರು ಕೇಂದ್ರ ಸರ್ಕಾರ ಅಕ್ಕಿ ಕೊಟ್ಟಿಲ್ಲ ಎನ್ನುತ್ತಿದ್ದಾರೆ. ಚುನಾವಣೆ ವೇಳೆ ಘೋಷಣೆಗೂ ಮುನ್ನ ಕಾಂಗ್ರೆಸ್ ಪಕ್ಷದವರಿಗೆ ಪರಿಜ್ಞಾನ ಇರಲಿಲ್ಲವೇ, ಮುಂದೆ ಯಾವ ರೀತಿ ತೊಂದರೆ ಉಂಟಾಗಬಹುದು ಎಂಬ ಚಿಂತನೆ ಇರಲಿಲ್ಲವೇ, 16 ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯಗೆ ಮುಂದಾಲೋಚನೆ ಇರಬೇಕಿತ್ತು. 16 ಬಾರಿ ಬಜೆಟ್ ಮಂಡಿಸಿದರೆ ಗದ್ದೆಯಲ್ಲಿ ಭತ್ತ ಬೆಳೆಯುವುದಿಲ್ಲ ಎಂದು ಟೀಕಿಸಿದರು.
ಪ್ರತಿಪಕ್ಷ ನಾಯಕನ ಆಯ್ಕೆ ವಿಚಾರ: ಪ್ರತಿಪಕ್ಷದ ನಾಯಕನನ್ನು ಅಧಿವೇಶನ ಮುನ್ನವೇ ನೇಮಕ ಮಾಡುವುದು ನಮ್ಮ ಧರ್ಮ. ಅಧಿವೇಶನ ಆರಂಭಗೊಳ್ಳುವ ಮುನ್ನ ಪ್ರತಿಪಕ್ಷ ನಾಯಕನನ್ನು ನೇಮಕ ಮಾಡಲಾಗುವುದು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಜುಗಲ್ಬಂದಿಗೆ ಸವಾಲೊಡ್ಡುವ ನಾಯಕನನ್ನು ನೇಮಕ ಮಾಡಲಾಗುವುದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.