ಚಾಮರಾಜನಗರ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಾಮುಂದು ನಾಮುಂದು ಎಂಬಂತೆ ಇರುವ 5-6 ಮಂದಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಶಾಕ್ ನೀಡಿದ್ದಾರೆ. ಚುನಾವಣೆಗೆ ಇನ್ನು ಒಂದು ವರ್ಷವಿರುವಾಗಲೇ ಕೊಳ್ಳೇಗಾಲ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿದ್ದಾರೆ.
ವೇದಿಕೆಯಲ್ಲೇ ಕೊಳ್ಳೇಗಾಲ ಟಿಕೆಟ್ ಫೈನಲ್ ಮಾಡಿದ ಬಿಎಸ್ವೈ.. ಎನ್. ಮಹೇಶ್ ಲಕಲಕ, ಆಕಾಂಕ್ಷಿಗಳಿಗೆ ಬೇಸರ - Former CM BS Yeddyurappa Statement
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಎನ್ ಮಹೇಶ್ ಅವರೇ ಮುಂದಿನ ಬಿಜೆಪಿ ಅಭ್ಯರ್ಥಿ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಘಂಟಾಘೋಷವಾಗಿ ಸಾರಿದ್ದಾರೆ.
ಧಾರ್ಮಿಕ ಕಾರ್ಯಕ್ರಮಕ್ಕಾಗಿ ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮಕ್ಕೆ ಆಗಮಿಸಿದ್ದ ಬಿಎಸ್ವೈ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ಬಾರಿ ಎನ್ ಮಹೇಶ್ ಅವರನ್ನು ಶಾಸನಸಭೆಗೆ ಕಳುಹಿಸಿದಂತೆ ಮುಂದಿನ ಬಾರಿಯೂ ಅವರನ್ನು ಆರಿಸಿ ಕಳುಹಿಸಿಕೊಡಿ ಎಂದು ಮನವಿ ಮಾಡುವ ಮೂಲಕ ಎನ್.ಮಹೇಶ್ ಅವರೇ ಬಿಜೆಪಿ ಅಭ್ಯರ್ಥಿ ಎಂದು ತಿಳಿಸಿದರು.
ಯಡಿಯೂರಪ್ಪ ಅವರ ಈ ಹೇಳಿಕೆಯಿಂದ ಈಗಾಗಲೇ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ಸಂಸದ ವಿ.ಶ್ರೀನಿವಾಸ ಪ್ರಸಾದ್ ಅಳಿಯ ಡಾ.ಮೋಹನ್, ಚಾಮರಾಜನಗರ ಸಿಪಿಐ ಬಿ.ಪುಟ್ಟಸ್ವಾಮಿ, ಕಿನಕಹಳ್ಳಿ ರಾಚಯ್ಯ ಅವರಿಗೆ ಬಿಎಸ್ವೈ ಹೇಳಿಕೆಯಿಂದ ಬೇಸರವಾಗಿದ್ದರೂ ಅಚ್ಚರಿಯಿಲ್ಲ. ಅವರು ಬಿಟ್ಟು ಇವರ್ಯಾರು ಎಂಬ ಹತ್ತಾರು ಮಾತುಗಳಿಗೆ ಯಡಿಯೂರಪ್ಪ ಇಂದು ಫುಲ್ ಸ್ಟಾಪ್ ಹಾಕಿದ್ದಾರೆ. ಮಹೇಶ್ ಅವರೇ ಮುಂದಿನ ಬಿಜೆಪಿ ಅಭ್ಯರ್ಥಿ ಎಂದು ಘಂಟಾಘೋಷವಾಗಿ ಸಾರಿದ್ದಾರೆ.