ಚಾಮರಾಜನಗರ: ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಜೊತೆಗೆ ಅರಣ್ಯ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದ ಉಮೇಶ್ ಕತ್ತಿ ನಿಧನ ಹೊಂದಿದ್ದಾರೆ. ಅರಣ್ಯ ಸಚಿವರಾಗಿದ್ದಾಗ ಕತ್ತಿಯವರು ಚಾಮರಾಜನಗರ ಜಿಲ್ಲೆಯ ಕಾಡಿನ ಸೌಂದರ್ಯಕ್ಕೆ ಮನಸೋತಿದ್ದರು. ಜಿಲ್ಲೆಯಲ್ಲಿ ಎರಡು ಹುಲಿ ಸಂರಕ್ಷಿತ ಮತ್ತು ಎರಡು ವನ್ಯಜೀವಿಧಾಮಗಳಿದ್ದು, ಇವೆಲ್ಲದಕ್ಕೂ ಸಚಿವರು ಭೇಟಿ ನೀಡಿದ್ದರು.
ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಫಾರಿ ನಡೆಸಲು ಜೀಪ್ ಏರುತ್ತಿದ್ದ ಉಮೇಶ್ ಕತ್ತಿ ' ಕಾಡು ಬಹಳ ಚೆಂದ ಇದೆ, ಪ್ರಾಣಿ ಮತ್ತು ಮಾನವ ಸಂಘರ್ಷ ತಡೆಗೆ ಆದಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದರು. ಕಾಡು ಸುತ್ತಿದ ಬಳಿಕ ತಾವು ಕಂಡ ಪ್ರಾಣಿಗಳ ಬಗ್ಗೆ ಮಾತನಾಡಿ ಸಂತಸ ಪಡುತ್ತಿದ್ದರು.
ಆನೆಗಳಿಗೆ ಕಾಯಿ ಬೆಲ್ಲ ತಿನ್ನಿಸಿದ್ದ ಸಚಿವ: ಎರಡು ಮೂರು ತಿಂಗಳ ಹಿಂದೆಯಷ್ಟೇ ಬಂಡೀಪುರ ಸಮೀಪದ ಗಿರಿಜನ ಪೋಡುಗಳಿಗೆ ಭೇಟಿ ನೀಡಿದ್ದರು. ಈ ಸಂದರ್ಭ ರಾಂಪುರದ ಆನೆ ಶಿಬಿರಕ್ಕೆ ತೆರಳಿದ್ದ ಉಮೇಶ್ ಕತ್ತಿ ಅಲ್ಲಿನ ಎಲ್ಲ ಆನೆಗಳಿಗೆ ತಮ್ಮ ಕೈಯಾರೆ ಕಾಯಿ - ಬೆಲ್ಲ ತಿನಿಸಿದ್ದರು. ಆನೆಗಳು ಮಾಡುವ ಕಸರತ್ತುಗಳು, ಸಲಾಂ ಮಾಡುತ್ತಿರುವುದನ್ನು ಕಂಡು ಖುಷಿಗೊಂಡಿದ್ದರು.