ಕರ್ನಾಟಕ

karnataka

ETV Bharat / state

ಗಡಿ ಜಿಲ್ಲೆಯಲ್ಲಿ ಕನ್ನಡ ಡಿಂಡಿಮ: ಭಾಷೆಯನ್ನು ಕಾಪಾಡುತ್ತಿದೆ ಅರಣ್ಯ ಪ್ರದೇಶ - ಚಾಮರಾಜನಗರ ಕನ್ನಡ ರಾಜ್ಯೋತ್ಸವ

ಕೇರಳ ಹಾಗೂ ತಮಿಳುನಾಡು ಹಂಚಿಕೊಂಡಿರುವ ಚಾಮರಾಜನಗರ ಗಡಿಗಳ‌ ನಡುವೆ ದಟ್ಟವಾದ ಅರಣ್ಯ ಪ್ರದೇಶವಿರುವುದರಿಂದ ವಾಣಿಜ್ಯ ಚಟುವಟಿಕೆಯಷ್ಟೇ ನಡೆಯುತ್ತಿದ್ದು, ಪರಭಾಷಿಕರು ಗಡಿಭಾಗದಲ್ಲಿ ನೆಲೆವೂರಿ ಪ್ರಭಾವ ಬೀರಲು ಕಷ್ಟಸಾಧ್ಯವಾಗಿದೆ. ರಾಜ್ಯದ ಇತರೆ ಗಡಿಜಿಲ್ಲೆ ಹಾಗೂ ಪ್ರಾಂತ್ಯಗಳನ್ನು ಹೋಲಿಸಿದರೆ, ನೆರೆ ಭಾಷೆಯ ಪ್ರಭಾವ ಜಿಲ್ಲೆಯಲ್ಲಿ ಸವಾರಿ ಮಾಡಲು ಬಿಟ್ಟಿಲ್ಲ. ತಮಿಳು, ಮಲಯಾಳಂ ಸಖ್ಯ ಹಾಗೂ ಇಂಗ್ಲಿಷ್ ವ್ಯಾಮೋಹದ ನಡುವೆಯೂ ಕನ್ನಡ ಈ ಜಿಲ್ಲೆಯಲ್ಲಿ‌ ಜನರ ಉಸಿರಾಗಿ ಬೆಳೆಯುತ್ತಿದೆ.

forest area protecting a kannada language in chamrajnagar
ಚಾಮರಾಜನಗರ ಜಿಲ್ಲೆಯಲ್ಲಿ ಕನ್ನಡ ಡಿಂಡಿಮ...ಭಾಷೆಯನ್ನು ಕಾಪಾಡುತ್ತಿದೆ ಅರಣ್ಯ ಪ್ರದೇಶ

By

Published : Nov 1, 2020, 9:02 AM IST

ಚಾಮರಾಜನಗರ: ಪರಿಸರ ಸಮತೋಲನ‌ದ ಪ್ರತೀಕವಾಗಿರುವ ಅರಣ್ಯ ಪ್ರದೇಶ ಇಲ್ಲಿ ಕನ್ನಡವನ್ನು ಕಾಪಾಡುತ್ತಿದೆ. ಹೋರಾಟ, ಚಳವಳಿಗಳನ್ನು ಜೀವಂತವಾಗಿರಿಸಿದೆ. ಜೊತೆಗೆ ಕನ್ನಡ ಪ್ರಜ್ಞೆಯೂ ಕೂಡ ಜಿಲ್ಲೆಯಲ್ಲಿ ಸಕ್ರಿಯವಾಗಿದೆ.

ಹೌದು, ರಾಜ್ಯದ ದಕ್ಷಿಣ ತುದಿಯಲ್ಲಿರುವ ಚಾಮರಾಜನಗರ ಜಿಲ್ಲೆಯೂ ತಮಿಳುನಾಡು ಹಾಗೂ ಕೇರಳದ ಗಡಿಯನ್ನು ಹಂಚಿಕೊಂಡರೂ ಕೂಡ ಭಾಷೆ, ಸೊಗಡು ಮತ್ತಷ್ಟು ವಿಸ್ತಾರವಾಗುತ್ತಿದೆಯೇ ಹೊರತು ಕಡಿಮೆಯಾಗಿಲ್ಲ. ತನ್ನದೇ ಭಾಷಾ ಸೊಗಡು, ಜನಪದದ ಶ್ರೀಮಂತಿಕೆಯಲ್ಲಿ ಕನ್ನಡ ನಿತ್ಯ ನೂತನವಾಗಿ ಜಿಲ್ಲೆಯಲ್ಲಿ ಹರಿಯುತ್ತಿದೆ.

ಕಾಡು ಒಂದು ಕಾರಣ:

ಕೇರಳ ಹಾಗೂ ತಮಿಳುನಾಡು ಹಂಚಿಕೊಂಡಿರುವ ಚಾಮರಾಜನಗರ ಗಡಿಗಳ‌ ನಡುವೆ ದಟ್ಟವಾದ ಅರಣ್ಯ ಪ್ರದೇಶವಿರುವುದರಿಂದ ವಾಣಿಜ್ಯ ಚಟುವಟಿಕೆಯಷ್ಟೇ ನಡೆಯುತ್ತಿದ್ದು, ಪರಭಾಷಿಕರು ಗಡಿಭಾಗದಲ್ಲಿ ನೆಲೆವೂರಿ ಪ್ರಭಾವ ಬೀರಲು ಕಷ್ಟಸಾಧ್ಯವಾಗಿದೆ. ರಾಜ್ಯದ ಇತರೆ ಗಡಿಜಿಲ್ಲೆ ಹಾಗೂ ಪ್ರಾಂತ್ಯಗಳನ್ನು ಹೋಲಿಸಿದರೆ, ನೆರೆ ಭಾಷೆಯ ಪ್ರಭಾವ ಜಿಲ್ಲೆಯಲ್ಲಿ ಸವಾರಿ ಮಾಡಲು ಬಿಟ್ಟಿಲ್ಲ. ತಮಿಳುನಾಡಿನ‌ ತಾಳವಾಡಿಯಲ್ಲಿ ಕನ್ನಡಿಗರೇ ಹೆಚ್ಚಿರುವುದರಿಂದ ತಮಿಳು ಭಾಷೆ ಜಿಲ್ಲೆಯಲ್ಲಿ ಅಷ್ಟೇನೂ ಮೂಗು ತೂರಿಸುವುದಿಲ್ಲ. ಹನೂರು ಭಾಗದ ಕಾಡಂಚಿನಲ್ಲಿ ವಾಸಿಸುತ್ತಿರುವ ಬಹುತೇಕರು ತಮಿಳು ಭಾಷಿಕರಾಗಿದ್ದರೂ ಕೂಡ ಕ್ರಮೇಣವಾಗಿ ಕನ್ನಡವನ್ನು ಮಾತನಾಡುತ್ತಿದ್ದಾರೆ. ಗೋಪಿನಾಥಂನಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಾಲಾ ವಾಸ್ತವ್ಯ ಮಾಡಿ ಅಲ್ಲಿನ ವಿದ್ಯಾರ್ಥಿಗಳ ಮನವಿ ಮೇರೆಗೆ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯನ್ನು ಮಂಜೂರು ಮಾಡಿರುವುದು ಕನ್ನಡ ಅಸ್ಮಿತೆ, ವಿಸ್ತಾರದ ಪ್ರತೀಕವಾಗಿ ನಿಂತಿದೆ.

ಸುರೇಶ್ ಕುಮಾರ್ ಅಭಿಪ್ರಾಯ:

ಗಡಿಜಿಲ್ಲೆಯಲ್ಲಿ ಕನ್ನಡ ಜೀವಂತಿಕೆಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈಟಿವಿ ಭಾರತದೊಂದಿಗೆ ಮಾತನಾಡಿ, ಗ್ರಾಮೀಣ ಸೊಗಡಿನ ಕನ್ನಡ ಭಾಷೆ ಬಳಕೆಯು ಜಿಲ್ಲೆಯ ಜನರ ವೈಶಿಷ್ಟ್ಯತೆಯಾಗಿದೆ. ಕೇರಳ ಮತ್ತು ತಮಿಳುನಾಡು ರಾಜ್ಯಗಳ ಗಡಿ ಹೊಂದಿದ್ದರೂ, ಅಲ್ಲಿನ ಭಾಷೆಗಳ ಪ್ರಭಾವವನ್ನು ನೀಗಿಸಿಕೊಂಡು ಕನ್ನಡ ಭಾಷೆಯನ್ನೇ ಉಸಿರಾಗಿಸಿಕೊಂಡಿರುವ ಚಾಮರಾಜನಗರ ಜಿಲ್ಲೆಯ ಜನತೆಯ ಕನ್ನಡಾಭಿಮಾನ ಬಹು ಪ್ರಶಂಸನೀಯವಾದದ್ದು. ಇದರಿಂದಾಗಿಯೇ ನಾಡಿನ ಸಾಂಸ್ಕೃತಿಕ ಭೂಪಟದಲ್ಲಿ ಚಾಮರಾಜನಗರ ಜಿಲ್ಲೆ ಮಹತ್ತರ ಸ್ಥಾನ ಪಡೆದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಕನ್ನಡ ಡಿಂಡಿಮ

ಹೋರಾಟದ ನೆಲ:

ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಮಾತನಾಡಿ, ದೇಶ- ವಿದೇಶದಲ್ಲಿ ಕನ್ನಡ, ಕರ್ನಾಟಕ, ಕನ್ನಡಿಗರಿಗೆ ಅನ್ಯಾಯವಾದರೆ,‌ ಅಪಮಾನವಾದರೆ ಮೊದಲ ಪ್ರತಿಕ್ರಿಯೆ, ಆಕ್ರೋಶ ವ್ಯಕ್ತವಾಗುವುದು ಚಾಮರಾಜನಗರದ ಮೂಲದಿಂದಲೇ. ನೆಲ-ಜಲ- ಭಾಷೆ ಕುರಿತು ಸಾವಿರಾರು ಹೋರಾಟಗಳಾಗಿವೆ. 40 ವರ್ಷಗಳಿಂದ ನಾನು ಜಿಲ್ಲೆಯೊಂದಿಗೆ ಒಡನಾಟವಿಟ್ಟುಕೊಂಡಿದ್ದೇನೆ. ಇಲ್ಲಿನ ಚಳುವಳಿ, ಭಾಷಾ ಪ್ರಜ್ಞೆಯು ಕನ್ನಡದ ಅಸ್ತಿತ್ವ ಉಳಿಯಲು ಸಹಕಾರಿಯಾಗಿದೆ. ರಾಜ್ಯದ ಇತೆರೆ ಜಿಲ್ಲೆಗಳಿಗೆ ಹೋಲಿಸಿದರೆ ನಿತ್ಯವೂ ಕನ್ನಡ ನಲಿದಾಡುವುದು ಚಾಮರಾಜನಗರದಲ್ಲೆಂದು ತಿಳಿಸಿದರು. ಅಲ್ಲದೇ, ಭಾಷೆಯ ಅಸ್ತಿತ್ವ ಚೆನ್ನಾಗಿದೆಯೆಂದು ಅಸಡ್ಡೆಯಿಂದ ಇರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ನಾನೆಲ್ಲೂ ಕಂಡಿಲ್ಲ:

ಬಳ್ಳಾರಿ ಜಿಲ್ಲೆಯಿಂದ ಚಾಮರಾಜನಗರಕ್ಕೆ ಗ್ರಾಮ ಲೆಕ್ಕಿಗರಾಗಿ ಬಂದಿರುವ ಶ್ರೀಧರ್ ಜಿಲ್ಲೆಯಲ್ಲಿ ಭಾಷೆಯ ಉಳಿವಿನ ಕುರಿತು ಮಾತನಾಡಿದರು.‌ ಬೆಳಗಾವಿ, ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ, ಬೀದರ್, ಬೆಂಗಳೂರು ಗ್ರಾಮಾಂತರ ಮುಂತಾದ ಜಿಲ್ಲೆಗಳಿಗೆ ಹೋಲಿಸಿದರೆ ಚಾಮರಾಜನಗರದಲ್ಲಿ ಅಪ್ಪಟ ಕನ್ನಡ, ಗ್ರಾಮೀಣ ಸೊಗಡು ಈಗಲೂ ಇದೆ.‌ ಪಟ್ಟಣದಲ್ಲಾಗಲಿ ಅಥವಾ ಹಳ್ಳಿಗಳಲ್ಲಾಗಲಿ ಡೇ, ಉಡೇ ಎಂಬ ಆರಂಭದ ಮಾತುಗಳಿಲ್ಲದೇ ಜನರು ಮಾತನಾಡುವುದಿಲ್ಲ. ಇಂಗ್ಲಿಷ್ ಪದಗಳನ್ನು ತಮ್ಮ ಸೊಗಡಿಗೆ ಹೊಂದಿಸಿಕೊಂಡಿದ್ದಾರೆ. ತಮಿಳು- ಮಲೆಯಾಳಂನ‌ ಅಬ್ಬರವಿಲ್ಲದೆ ಕನ್ನಡ ಎಂದಿನಂತೆ ಜಿಲ್ಲೆಯಲ್ಲಿ ಹಸನಾಗಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.

ಇನ್ನು, ಚಾಮರಾಜನಗರ, ಕೊಳ್ಳೇಗಾಲ ಭಾಷೆಯ ಸೊಗಡು ಜನಪ್ರಿಯವಾಗಿದ್ದು, ಗ್ರಾಮೀಣ ಭಾಷಾ ಸೊಗಡಿನ ವಿಡಿಯೋಗಳೇ ಸಾಮಾಜಿಕ‌ ಜಾಲತಾಣದಲ್ಲಿ ಹೆಚ್ಚು ವೈರಲ್​ ಆಗುತ್ತಿವೆ. ತಮಿಳು, ಮಲಯಾಳಂ ಸಖ್ಯ ಹಾಗೂ ಇಂಗ್ಲೀಷ್ ವ್ಯಾಮೋಹದ ನಡುವೆಯೂ ಕನ್ನಡ ಈ ಜಿಲ್ಲೆಯಲ್ಲಿ‌ ಉಸಿರಾಡುತ್ತಿದೆ, ಬೆಳೆಯುತ್ತಿದೆ.

ABOUT THE AUTHOR

...view details