ಚಾಮರಾಜನಗರ:ಬಾಲಕಿಯನ್ನು ಬಲವಂತದಿಂದ ಮದುವೆ ಮಾಡಿಕೊಂಡಿದ್ದ ಯುವಕ ಹಾಗೂ ಇದಕ್ಕೆ ಸಹಕರಿಸಿದ್ದ ಈತನ ತಾಯಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಚಾಮರಾಜನಗರ ಜಿಲ್ಲಾ ಮಕ್ಕಳ ಸ್ನೇಹಿ ನ್ಯಾಯಾಲಯವು ಆದೇಶ ನೀಡಿದೆ. ತಮಿಳುನಾಡಿನ ತಿರಚಂಗೂರು ತಾಲೂಕಿನ ಶರಣ್ ರಾಜ್(25) ಹಾಗೂ ಈತನ ತಾಯಿ ಸೆಲ್ವಿ(40) ಶಿಕ್ಷೆಗೊಳಗಾದ ಅಪರಾಧಿಗಳು. 14 ವರ್ಷದ ಬಾಲಕಿಯನ್ನು ಪುಸಲಾಯಿಸಿ ಬೈಕ್ ನಲ್ಲಿ ಹತ್ತಿಸಿಕೊಂಡು ಕರೆದೊಯ್ದು ಬಲವಂತದಿಂದ ಶರಣ್ ರಾಜ್ ಮದುವೆಯಾಗಿದ್ದ.
ಅಲ್ಲದೇ ಬಾಲಕಿಗೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಲು ತಾಯಿ ಸೆಲ್ವಿ ಸಹಾಯ ಮಾಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ವಾದ - ಪ್ರತಿವಾದಗಳನ್ನು ಆಲಿಸಿ, ನ್ಯಾಯಮೂರ್ತಿ ನಿಶಾರಾಣಿ ಅವರು, ತಾಯಿ ಹಾಗೂ ಮಗನಿಗೆ ತಲಾ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
2018 ರಲ್ಲಿ ಬಲವಂತಾಗಿ ಎಳೆದೊಯ್ದು ಮದುವೆ:ಶರಣ್ ರಾಜ್ ಎಲೆಕ್ಟ್ರೆಷಿಯನ್ ಕೆಲಸ ಮಾಡಿಕೊಂಡಿದ್ದ. ತಾಯಿ ಸೆಲ್ವಿ ಪೇಪರ್ ಮಿಲ್ ನಲ್ಲಿ ನೌಕರಿ ಮಾಡುತ್ತಿದ್ದರು. 2018 ರ ಸೆಪ್ಟೆಂಬರ್ 9 ರಂದು ಹನೂರು ತಾಲೂಕಿನ ಗ್ರಾಮವೊಂದರ 14 ವರ್ಷದ ಬಾಲಕಿಯನ್ನು ಶರಣ್ ರಾಜ್ ತನ್ನ ಬೈಕ್ ನಲ್ಲಿ ಪುಸಲಾಯಿಸಿ ಕರೆದೊಯ್ದಿದ್ದನು. ಬಳಿಕ ಆ ಬಾಲಕಿ ಜೊತೆ ಬಲವಂತದಿಂದ ಮದುವೆ ಮಾಡಿಕೊಂಡು ಆಕೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದ.
ಕೃತ್ಯಕ್ಕೆ ತಾಯಿ ಸೆಲ್ವಿ ಮತ್ತು ಶಶಿಕುಮಾರ್ ಎಂಬವರು ಸಹಕರಿಸಿದ್ದರು. ಈ ಘಟನೆ ಸಂಬಂಧ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಅಂದಿನ ಇನ್ಸ್ಪೆಕ್ಟರ್ ಬಿ.ಮಹೇಶ್ ಪ್ರಕರಣ ದಾಖಲಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ( ಕೃತ್ಯದ ಶಶಿಕುಮಾರ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ) ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.