ಕೊಳ್ಳೇಗಾಲ (ಚಾಮರಾಜನಗರ): ತಾಲೂಕಿನ ನದಿ ದಡದಲ್ಲಿರುವ ಹಳೇ ಹಂಪಾಪುರ, ಹಳೇ ಅಣಗಳ್ಳಿ ಗ್ರಾಮದ ಜಮೀನುಗಳು ನದಿ ನೀರಿನಿಂದ ಆವೃತಗೊಂಡಿವೆ. ಇದೇ ರೀತಿ ನೀರಿನ ಪ್ರಮಾಣ ಹೆಚ್ಚಾದಲ್ಲಿ, ಇನ್ನಳಿದ ಮುಳ್ಳೂರು, ದಾಸನಪುರ, ಹರಳೆ, ಯಡಕುರಿಯಾ ಗ್ರಾಮಗಳಿಗೂ ನೀರು ನುಗ್ಗುವ ಸಾಧ್ಯತೆ ದಟ್ಟವಾಗಿದೆ.
ನದಿ ಪಾತ್ರದ ಗ್ರಾಮದಲ್ಲಿ ಪ್ರವಾಹ ಭೀತಿ: ಜಮೀನುಗಳಿಗೆ ನುಗ್ಗಿದ ನೀರು - ಕಾವೇರಿ ನದಿಯ ಹೊರ ಹರಿವು ಹೆಚ್ಚಳ
ಜಲಾನಯನ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ತಾಲೂಕಿನ ಕೆಲವು ಗ್ರಾಮಗಳ ಜಮೀನುಗಳು ನೀರಿನಿಂದ ಆವೃತವಾಗಿವೆ. ಹೀಗಾಗಿ, ಜನರು ಪ್ರವಾಹ ಭೀತಿ ಎದುರಿಸುತ್ತಿದ್ದಾರೆ.
![ನದಿ ಪಾತ್ರದ ಗ್ರಾಮದಲ್ಲಿ ಪ್ರವಾಹ ಭೀತಿ: ಜಮೀನುಗಳಿಗೆ ನುಗ್ಗಿದ ನೀರು ಗ್ರಾಮದ ಜಮೀನುಗಳು ನದಿಯ ನೀರಿನಿಂದ ಜಲಾವೃತ](https://etvbharatimages.akamaized.net/etvbharat/prod-images/768-512-8357575-828-8357575-1596982520624.jpg)
ಕಾವೇರಿ ನದಿಯ ಹೊರ ಹರಿವು ಹೆಚ್ಚಾಗಿ, ಇಂದು 70 ಸಾವಿರ ಕ್ಯುಸೆಕ್ ನೀರನ್ನು ಕೆಆರ್ಎಸ್ ಮತ್ತು ಕಬಿನಿ ಜಲಾಶಯಗಳಿಂದ ಹೊರ ಬಿಡಲಾಗಿದೆ. ನಿನ್ನೆ ಸಂಜೆವರೆಗೂ ನದಿ ಪಾತ್ರದಲ್ಲಿ ತುಂಬಿ ಹರಿಯುತ್ತಿದ್ದ ನೀರು ರಾತ್ರಿ ಜಮೀನುಗಳಿಗೆ ನುಗ್ಗಿದೆ. ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿ ಬಿಡುವ ಸಾಧ್ಯತೆ ಇರುವುದರಿಂದ ನದಿಯಲ್ಲಿ ಪ್ರವಾಹ ಹೆಚ್ಚಳವಾಗಿ ಯಾವುದೇ ಕ್ಷಣದಲ್ಲಾದರೂ ಅಪಾಯದ ಮಟ್ಟ ಮೀರಬಹುದು ಎಂದು ಜನರು ಆತಂಕಕ್ಕೊಳಗಾಗಿದ್ದಾರೆ.
ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಇಲ್ಲಿನ ತಹಶೀಲ್ದಾರ್ ಕುನಾಲ್ ಹಾಗೂ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದು, ಪ್ರವಾಹ ಕೇಂದ್ರ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಗತ್ಯ ಬಿದ್ದರೆ ಗಂಜಿ ಕೇಂದ್ರ ತೆರೆಯಲು ಸಿದ್ದತೆ ಮಾಡಿಕೊಂಡಿದ್ದಾರೆ. ಆದರೆ ಈ ಭಾಗದಲ್ಲಿ ಭತ್ತದ ಖಾರಿಪ್ ಬೆಳೆ ಕಟಾವಿಗೆ ಬಂದಿದ್ದು, ಕೆಲವು ಕಡೆಗಳಲ್ಲಿ ಪ್ರವಾಹದಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಮಳೆಯ ನಡುವೆಯೂ ರೈತರು ಹರಸಾಹಸ ಪಡುತ್ತಿದ್ದಾರೆ.