ಚಾಮರಾಜನಗರ:ಜಿಲ್ಲಾ ಉಸ್ತುವಾರಿ ಸಚಿವ ನೇಮಕವಾಗದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ನಗರದ ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಪಡೆದರು.
ಕೋವಿಡ್ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸರಳ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಡಿಸಿ ರವಿ ಧ್ವಜಾರೋಹಣ ನೆರವೇರಿಸಿ ಪೊಲೀಸ್ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಪ್ರಾಣದ ಹಂಗನ್ನು ತೊರೆದು ತಮ್ಮ ಸರ್ವಸ್ವವನ್ನು ನಾಡಿಗೆ ಸಮರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರರ ಶ್ರಮ ವ್ಯರ್ಥವಾಗದಂತೆ ಒಗ್ಗಟ್ಟಿನಿಂದ ನಾವು ಬದುಕಬೇಕಿದೆ. ರಾಷ್ಟ್ರೀಯ ಪ್ರಜ್ಞೆ ನಿರಂತರವಾಗಿ ಜಾಗೃತವಾಗಿರುವಂತೆ ಎಚ್ಚರ ವಹಿಸಬೇಕು ಎಂದರು.
'ಜನರ ಯೋಜನೆ' ಜಾರಿ: ಇಲ್ಲಿ ತನಕ ಜಿಲ್ಲೆಯಲ್ಲಿ 4.75 ಲಕ್ಷ ಮಂದಿಗೆಗೆ ಲಸಿಕೆ ನೀಡಲಾಗಿದ್ದು 3.5 ಕೋಟಿ ರೂ. ವೆಚ್ಚದಲ್ಲಿ 6 ಆ್ಯಂಬುಲೆನ್ಸ್, ಮಕ್ಕಳ ವೆಂಟಿಲೇಟರ್ ಗಳನ್ನು ಖರೀದಿಸಲಾಗಿದೆ. ಗ್ರಾ.ಪಂ. ಗಳು ತಯಾರಿಸುವ ದೂರದೃಷ್ಟಿ ಯೋಜನೆಯನ್ನು 'ಜನರ ಯೋಜನೆ' ಎಂಬ ಹೆಸರಿನಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಮೂರನೇ ಡಿಸಿ: ಹರ್ಷ ಗುಪ್ತ, ಬಿ.ಬಿ ಕಾವೇರಿ ಬಳಿಕ ಸಚಿವರ ಬದಲಿಗೆ ಧ್ವಜಾರೋಹಣ ನೆರವೇರಿಸಿದ ಮೂರನೇ ಡಿಸಿ ಎಂಬ ಹೆಗ್ಗಳಿಕೆಗೆ ಡಾ. ಎಂ.ಆರ್. ರವಿ ಪಾತ್ರರಾದರು. ರಾಷ್ಟ್ರಪತಿ ಆಡಳಿತದ ವೇಳೆ ಅಂದಿನ ಚಾಮರಾಜನಗರ ಡಿಸಿಯಾಗಿದ್ದ ಹರ್ಷ ಗುಪ್ತ ಧ್ವಜಾರೋಹಣ ಮಾಡಿದ್ದರು. ಅದಾದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ಯಾರು ನೇಮಕವಾಗದಿದ್ದರಿಂದ ಡಿಸಿ ಬಿ.ಬಿ. ಕಾವೇರಿ, ಬಳಿಕ ಈ ವರ್ಷ ಡಾ. ಎಂ.ಆರ್.ರವಿ ಧ್ವಜಾರೋಹಣ ನೆರವೇರಿಸಿದ್ದಾರೆ.