ಚಾಮರಾಜನಗರ:ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವಲಯದಲ್ಲಿ ಬೆಂಕಿ ಬಿದ್ದಿದ್ದು ನೂರಾರು ಎಕರೆ ಅರಣ್ಯ ನಾಶವಾಗಿದೆ ಎನ್ನಲಾಗ್ತಿದೆ.
ಕಳೆದ ಮೂರು ದಿನಗಳಿಂದ ಬೈಲೂರು ವಲಯದ ಕೌಳೆಹಳ್ಳ ಬೆಟ್ಟ ಹಾಗೂ ಕೊಳ್ಳೇಗಾಲ ವಲಯದ ಆಂಡಿಪಾಳ್ಯದಲ್ಲಿ ಆಗಾಗ್ಗೆ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಈ ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹೈರಾಣಾಗಿದ್ದಾರೆ.
ಬಿಆರ್ಟಿಯಲ್ಲಿ ಕಾಡಿಗೆ ಬಿದ್ದ ಬೆಂಕಿ- ಸಾವಿರಾರು ಮರಗಳು ಬೆಂಕಿಗಾಹುತಿ ಮಾವೊತ್ತೂರು, ಕೆ.ಕೆ.ಡ್ಯಾಂ, ನಲ್ಲಿಕತ್ರಿ, ಅಕ್ಕ-ತಂಗಿಯರ ಬೆಟ್ಟ, ಹೊನ್ನೆಬರೆ ಬೆಟ್ಟ, ಕಗಲಿಗುಂದಿ, ಕೊಳದಗುಂಡಿ ಬೆಟ್ಟ ಸೇರಿದಂತೆ ೨೦ ಕ್ಕೂ ಹೆಚ್ಚು ಸ್ಥಳಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಬೆಂಕಿ ಬೀಳದಂತೆ ತಡೆಯಲು ಅರಣ್ಯ ಇಲಾಖೆ ಹರಸಾಹಸಪಡುತ್ತಿದ್ದಾರೆ. ಆದ್ರೆ ಕಿಡಿಗೇಡಿಗಳ ಕೃತ್ಯಕ್ಕೆ ನೂರಾರು ಎಕರೆ ಕಾಡು ಸುಟ್ಟು ಬೂದಿಯಾಗುತ್ತಿದೆ. ಅರಣ್ಯ ಇಲಾಖೆ ಬೇಸಿಗೆ ಕಾಲದಲ್ಲೂ ಹೆಚ್ಚಿನ ಸಿಬ್ಬಂದಿ ನಿಯೋಜಿಸಿಲ್ಲವೆಂದು ಪರಿಸರ ಪ್ರೇಮಿ ಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.