ಚಾಮರಾಜನಗರ : ಗೋ ಆಧಾರಿತ ಸಾವಯವ ಕೃಷಿಗೆ ಭಾರತದಲ್ಲಿ ವಿಶೇಷ ಸ್ಥಾನಮಾನ ಇದೆ. ಅಂತೆಯೇ ಗೋವಿನ ಸೆಗಣಿಗೆ ಧಾರ್ಮಿಕ ಸ್ಥಾನಮಾನ ಕಲ್ಪಿಸಲಾಗಿದೆ. ತಮಿಳುನಾಡಿನ ತಾಳವಾಡಿ ತಾಲೂಕಿನ ಗುಮ್ಮಟಾಪುರದಲ್ಲಿ ವಿಶೇಷ 'ಗೊರೆ ಹಬ್ಬ'ವನ್ನು ಆಚರಿಸಲಾಗುತ್ತದೆ. ಈ ಗೊರೆ ಹಬ್ಬದ ವಿಶೇಷತೆಯೆಂದರೆ ಸೆಗಣಿ ಉಂಡೆಗಳನ್ನು ಪರಸ್ಪರ ಎರಚಾಡಿಕೊಳ್ಳುವುದು.
ಈ ಗೊರೆಹಬ್ಬವನ್ನು ಕನ್ನಡಿಗರೇ ಹೆಚ್ಚಿರುವ ಗುಮ್ಮಟಾಪುರದಲ್ಲಿ ಹಲವಾರು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿವರ್ಷ ದೀಪಾವಳಿಯ ಬಲಿಪಾಡ್ಯಮಿ ಮರುದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವಿಶೇಷ ಹಬ್ಬವನ್ನು ನೋಡಲು ಸಾವಿರಾರು ಮಂದಿ ಆಗಮಿಸುತ್ತಾರೆ.
ಗ್ರಾಮದ ಯುವಕರು ಎಲ್ಲಿಲ್ಲದ ಹುಮ್ಮಸ್ಸಿನಿಂದ ಸೆಗಣಿ ಎರಚಾಡುವ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಇಂದು ನಡೆದ ಗೊರೆಹಬ್ಬದಲ್ಲಿ ನೂರಾರು ಯುವಕರು, ಹಿರಿಯರು ಸಗಣಿಯಿಂದ ಮಾಡಿದ ಉಂಡೆಗಳಿಂದ ಪರಸ್ಪರ ಹೊಡೆದಾಡಿಕೊಂಡು ತಮ್ಮ ಶಕ್ತಿ ಪ್ರದರ್ಶನ ಮಾಡಿದರು.
ಸೆಗಣಿ ಎರಚಾಡುತ್ತ ಹಬ್ಬ ಆಚರಣೆ.. ಗುಮ್ಮಟಾಪುರದಲ್ಲಿ ವಿಶೇಷ ಗೋರೆಹಬ್ಬ ಹಬ್ಬದ ಹಿನ್ನೆಲೆ ಏನು..? : ಗ್ರಾಮದ ಬೀರೇಶ್ವರ ಸ್ವಾಮಿಯ ಇಷ್ಟಾರ್ಥವಾಗಿ ಗೊರೆಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹಿರಿಯರ ಪ್ರಕಾರ, ಗ್ರಾಮದ ಕಾಳೇಗೌಡ ಎಂಬುವರ ಮನೆಗೆ ಉತ್ತರ ದೇಶದಿಂದ ದೇವರಗುಡ್ಡನೊಬ್ಬ ಬಂದಿದ್ದ. ಅವನು ಸತ್ತ ಮೇಲೆ ಅವನ ಜೋಳಿಗೆ, ಬೆತ್ತ, ಎಲ್ಲವನ್ನು ತಿಪ್ಪೆ ಗುಂಡಿಗೆ ಬಿಸಾಕಿದ್ದರಂತೆ. ಕೆಲವು ದಿನಗಳ ನಂತರ ಆ ತಿಪ್ಪೆಗುಂಡಿ ಬಳಿ ಎತ್ತಿನ ಗಾಡಿಯೊಂದು ಹೋದಾಗ ಲಿಂಗವೊಂದು ಕಾಣಿಸಿಕೊಂಡಿತ್ತಂತೆ. ಗಾಡಿಯ ಚಕ್ರ ಲಿಂಗದ ಮೇಲೆ ಹರಿದ ಪರಿಣಾಮ ಅದರಿಂದ ರಕ್ತ ಚಿಮ್ಮಿತ್ತಂತೆ. ಬಳಿಕ ಗ್ರಾಮದ ಮುಖಂಡರ ಕನಸಿನಲ್ಲಿ ಕಾಣಿಸಿಕೊಂಡ ದೇವರಗುಡ್ಡಪ್ಪ ದೀಪಾವಳಿ ಹಬ್ಬದ ಮರುದಿನವೇ ಗೊರೆಹಬ್ಬ ಮಾಡುವಂತೆ ಹೇಳಿದ್ದರು ಎಂಬ ಪ್ರತೀತಿ ಇದೆ. ಬಳಿಕ ಲಿಂಗ ಕಾಣಿಸಿಕೊಂಡ ತಿಪ್ಪೆಗುಂಡಿಯಲ್ಲೇ ದೇವಸ್ಥಾನ ಕಟ್ಟಿ ಗೊರೆಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಗೊರೆ ಹಬ್ಬ ಆರಂಭಕ್ಕೂ ಮುನ್ನ ಕೆರೆಯಂಗಳದಲ್ಲಿ ಕತ್ತೆಯ ಮೈತೊಳೆದು ಪೂಜೆ ಸಲ್ಲಿಸಿ ಮೆರವಣಿಗೆ ಮಾಡಲಾಗುತ್ತದ. ಬಳಿಕ ಆ ಕತ್ತೆಗಳನ್ನು ಸಗಣಿ ಎರಚಾಡುವ ಬೀರಪ್ಪನ ಗುಡಿಯ ಬಳಿಗೆ ಕರೆತರಲಾಗುತ್ತದೆ. ನಂತರ ಕತ್ತೆಯನ್ನು ತೊಳೆಯಲಾಗಿದ್ದ ಕೆರೆಯಲ್ಲಿ ಎಲ್ಲರೂ ಸ್ನಾನ ಮಾಡಿಕೊಂಡು ಊರಿಗೆ ಬರುವಾಗ ಚಾಡಿಕೋರನನ್ನು ಹಿಯ್ಯಾಳಿಸುತ್ತ, ಊರ ಗೌಡನನ್ನು ಬೈಯುತ್ತ ಸಂಭ್ರಮಿಸಿ ಕೇಕೆ ಹಾಕುತ್ತ ಬರುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ.
ಇನ್ನು, ಹಿರಿಯರು ಹಾಕಿಕೊಟ್ಟ ಸಂಪ್ರದಾಯದಂತೆ ಪ್ರತಿವರ್ಷ ಗೊರೆ ಹಬ್ಬವನ್ನು ಆಚರಿಸುತ್ತ ಬರಲಾಗುತ್ತಿದೆ. ಹಬ್ಬದಲ್ಲಿ ಜಾತಿಬೇಧವಿಲ್ಲದೇ ಸಹೋದರತ್ವವನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಗೊರೆಹಬ್ಬ ಆಚರಿಸಿ ಬೀರೇಶ್ವರನನ್ನು ಬೇಡಿಕೊಂಡರೆ ಒಳಿತಾಗಲಿದೆ ಎಂಬುದು ಇಲ್ಲಿನ ಗ್ರಾಮಸ್ಥರ ನಂಬಿಕೆ.
ಇದನ್ನೂ ಓದಿ :ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಹುಬ್ಬಳ್ಳಿ ಪೋರಿಯ ಜ್ಞಾಪಕ ಶಕ್ತಿ!