ಚಾಮರಾಜನಗರ: ಮದುವೆ ಅಂದ್ರೆ ವರನಿಗೆ ಐಷಾರಾಮಿ ಕಾರು, ಬೈಕ್ ತಂದು ನಿಲ್ಲಿಸುವುದು ಸಾಮಾನ್ಯ. ಆದರೆ, ಇಲ್ಲೋರ್ವ ಯುವ ರೈತ ತನ್ನ ನೆಚ್ಚಿನ ಜೋಡೆತ್ತುಗಳಿಗೆ ವಿಶೇಷ ವೇದಿಕೆ ನಿರ್ಮಿಸಿ ತನ್ನ ಮದುವೆಯನ್ನು ವಿಶಿಷ್ಟವಾಗಿ ನೆರವೇರಿಸಿಕೊಂಡಿದ್ದಾರೆ.
ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಗ್ರಾಮದಲ್ಲಿ ಇಂದು ವಿಶೇಷ ಮದುವೆಯೊಂದು ನಡೆದಿದ್ದು, ಕೃಷಿ ಚಟುವಟಿಕೆಗೆ ನೆರವಾಗುವ ತಮ್ಮ ಎತ್ತುಗಳನ್ನು ಮದುವೆ ಛತ್ರಕ್ಕೆ ಕರೆತಂದು ಅದಕ್ಕಾಗಿಯೇ ವೇದಿಕೆ ನಿರ್ಮಿಸಿ ಗೋಪ್ರೀತಿ ತೋರುವ ಮೂಲಕ ಮದುವೆ ಸಂಭ್ರಮವನ್ನು ಹೆಚ್ಚಿಸಿದ್ದಾರೆ.
ನಂಜನಗೂಡು ತಾಲೂಕಿನ ಚಿಕ್ಕಹೊಮ್ಮ ಗ್ರಾಮದ ಮಹೇಶ್ ಅವರೊಟ್ಟಿಗೆ ತೊರವಳ್ಳಿ ಗ್ರಾಮದ ಯೋಗಿತಾ ಸಪ್ತಪದಿ ತುಳಿದಿದ್ದಾರೆ. ಮದುವೆ ಸಮಾರಂಭಕ್ಕೆ ತಾವು ಸಾಕಿದ ಎತ್ತುಗಳನ್ನು ಕರೆತಂದು ಅವುಗಳು ಕೂಡ ವಿವಾಹಕ್ಕೆ ಸಾಕ್ಷೀಕರಿಸಬೇಕು ಎಂಬ ವರನ ಆಸೆಯನ್ನು ಇಲ್ಲ ಎನ್ನದ ಕುಟುಂಬಸ್ಥರು ಎತ್ತುಗಳನ್ನು ಸಿಂಗರಿಸಿ- ಅದಕ್ಕಾಗಿ ವೇದಿಕೆಯನ್ನು ನಿರ್ಮಿಸಿ ವಧು - ವರರಿಗೆ ಜೋಡೆತ್ತುಗಳಿಂದ ಆಶೀರ್ವಾದವನ್ನು ಕೊಡಿಸಿ ವಿಶೇಷವಾಗಿ ಮದುವೆ ನಡೆಸಿದ್ದಾರೆ.