ಚಾಮರಾಜನಗರ: ಹೆಂಡತಿ ಹೊರ ಹೋದ ವೇಳೆ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ತಂದೆಗೆ ಚಾಮರಾಜನಗರದ ಮಕ್ಕಳ ಸ್ನೇಹಿ ನ್ಯಾಯಾಲಯವು 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಶಿಕ್ಷೆಗೊಳಗಾದ ಅಪರಾಧಿಯು ಮೈಸೂರಿನ ನಿವಾಸಿ. ಈತ ಮೂರು ಮದುವೆ ಯಾಗಿದ್ದು, ಮೊದಲ ಹೆಂಡತಿ ದೂರವಾಗಿದ್ದರೆ, ಎರಡನೇ ಹೆಂಡತಿ ಮೃತಪಟ್ಟಿದ್ದಳು. ಚಾಮರಾಜನಗರದ ಮೂಲದ ಮಹಿಳೆಯೊಬ್ಬರ ಜೊತೆ ಮೂರನೇ ವಿವಾಹವಾಗಿತ್ತು.
2022ರ ಜನವರಿ 4 ರಂದು ಅಪರಾಧಿ ಪತ್ನಿ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೊರಗಡೆ ತೆರಳಿದ್ದ ವೇಳೆ 5 ವರ್ಷದ ಅಪ್ರಾಪ್ತೆ ಮೇಲೆ ಈತ ಅತ್ಯಾಚಾರ ಎಸಗಿದ್ದ. ಈ ಸಂಬಂಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವೈದ್ಯಕೀಯ ಪರೀಕ್ಷೆಗಳಿಂದ ತಂದೆಯ ಹೇಯಕೃತ್ಯ ಸಾಬೀತಾದ ಹಿನ್ನೆಲೆ ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎ.ಸಿ.ನಿಶಾರಾಣಿ ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿದ್ದಾರೆ. ಜೊತೆಗೆ, ನೊಂದ ಬಾಲಕಿಗೆ ಪರಿಹಾರ ರೂಪದಲ್ಲಿ 6 ಲಕ್ಷ ರೂ. 30 ದಿನದೊಳಗೆ ಕೊಡಬೇಕು ಎಂದು ಕಾನೂನು ಸೇವಾ ಪ್ರಾಧಿಕಾರವು ಆದೇಶಿಸಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್ ವಾದ ಮಂಡಿಸಿದ್ದರು.