ಚಾಮರಾಜನಗರ: ಅಪ್ಪನ ಹೆಸರೇನೆಂದು ಕೇಳಿದಾಗ ತನ್ನ ಹೆಸರು ಹೇಳಲಿಲ್ಲವೆಂದು 6 ವರ್ಷದ ಬಾಲಕಿಯನ್ನು ಕೊಂದ ಘಟನೆ ಹನೂರು ತಾಲೂಕಿನ ಮುದ್ದಶೆಟ್ಟಿಹಳ್ಳಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಪೂರ್ಣಿಮಾ(6 ) ಮೃತಪಟ್ಟ ಬಾಲಕಿ. ನಾಗರಾಜ ಅಲಿಯಾಸ್ ಕೆಂಡ ಮಗಳನ್ನೇ ಕೊಂದಿರುವ ಪಾಪಿ ತಂದೆ. ಮಲೆಮಹದೇಶ್ವರ ಬೆಟ್ಟದ ರಾಜೇಶ್ವರಿ ಎಂಬಾಕೆಯೊಂದಿಗೆ ಮದುವೆಯಾಗಿದ್ದ ನಾಗರಾಜ್, 6 ವರ್ಷದ ಹಿಂದೆ ಪತ್ನಿ ತೊರೆದಿದ್ದ. ಬಳಿಕ,ಆಕೆ ಮಹೇಶ ಎಂಬಾತನೊಂದಿಗೆ ಮದುವೆಯಾಗಿದ್ದಳು. ಹೆಂಡತಿಯನ್ನು ಬಿಡುವಾಗ ಮಗು ಪೂರ್ಣಿಮಾಗೆ 3 ತಿಂಗಳು ಎಂದು ತಿಳಿದುಬಂದಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಮಕ್ಕಳನ್ನು ನೋಡಬೇಕೆಂದು ಪೂರ್ಣಿಮಾ ಹಾಗೂ ಇನ್ನೊಬ್ಬ ಮಗನನ್ನು ಕರೆದೊಯ್ದ ನಾಗರಾಜ, ಮಗಳ ಬಳಿ ಅಪ್ಪನ ಹೆಸರೇನೆಂದು ಕೇಳಿದ್ದಾನೆ. ಆಗ, ಎರಡನೇ ಗಂಡ ಮಹೇಶನ ಹೆಸರನ್ನು ಹೇಳಿದ್ದರಿಂದ ಕುಪಿತಗೊಂಡ ನಾಗರಾಜ್, ದೊಣ್ಣೆಯಿಂದ ಮಗಳ ಮುಖಕ್ಕೆ ಹೊಡೆದು ಕೊಂದು ಬಳಿಕ ಶವ ಹೂತಿಟ್ಟು ಪರಾರಿಯಾಗಿದ್ದಾನೆ.
ಇತ್ತ ರಾಮಾಪುರ ಠಾಣೆಯಲ್ಲಿ ತಾಯಿ ರಾಜೇಶ್ವರಿ ಕಳೆದ ಸೆ.6 ರಂದು ಮಗಳು ಕಾಣೆಯಾಗಿದ್ದಾಳೆಂದು ದೂರು ನೀಡಿದ್ದಳು. ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಕಳೆದ 3 ರಂದು ಆನೇಕಲ್ ನಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಡಿಸಿದಾಗ ಮಗಳನ್ನು ಕೊಂದಿರುವ ವಿಚಾರ ಬೆಳಕಿಗೆ ಬಂದಿದೆ.
ಇಂದು ರಾಮಾಪುರ ಪಿಐ ಮನೋಜ್ ಕುಮಾರ್, ತಹಸಿಲ್ದಾರ್ ಸಮ್ಮುಖದಲ್ಲಿ ಹೂತಿಟ್ಟಿದ್ದ ಬಾಲಕಿಯ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸದ್ಯ, ರಾಮಾಪುರ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.