ಚಾಮರಾಜನಗರ: ಕೊರೊನಾ ಲಾಕ್ಡೌನ್ ಪರಿಣಾಮ ಚಾಮರಾಜನಗರ ಜನರು ಕೃಷಿ ಕಡೆ ಮರಳಿದ್ದು, ಜಿಲ್ಲೆಯಲ್ಲಿ ಒಟ್ಟು 4,500 ಎಕರೆ ಬೀಳು ಭೂಮಿಯಲ್ಲಿ ಬಿತ್ತನೆ ಕಾರ್ಯ ನಡೆದಿದೆ.
ಹೌದು, ಜಿಲ್ಲೆಯ 49,256 ಹೆಕ್ಟೇರ್ ಪ್ರದೇಶದ ಬೀಳು ಭೂಮಿಯಲ್ಲಿ 4,597 ಎಕರೆ(1839 ಹೆಕ್ಟೇರ್) ಪ್ರದೇಶದಲ್ಲಿ ಈ ಬಾರಿ ಬಿತ್ತನೆಯಾಗಿದ್ದು ಲಾಕ್ಡೌನ್ ಪರಿಣಾಮದಿಂದ ಕೃಷಿ ಇಲಾಖೆ ಗುರಿ ಮೀರಿದ ಸಾಧನೆ ಮಾಡಿದೆ. 2017-18ರ ಮುಂಗಾರು ಹಂಗಾಮಿನಲ್ಲಿ ಶೇ. 91 ಬಿತ್ತನೆಯಾಗಿದ್ದರೆ, 2018-19ರಲ್ಲಿ ಶೇ. 85, 2019-20ರಲ್ಲಿ ಶೇ. 87, 2020-21ರಲ್ಲಿ ಶೇ. 101.52ರಷ್ಟು ಆಗಿದೆ.
ಗುಂಡ್ಲುಪೇಟೆ ತಾಲೂಕಿನಲ್ಲಿ ಗುರಿ ಇದ್ದ ಬಿತ್ತನೆ ಪ್ರದೇಶ 35,585 ಹೆಕ್ಟೇರ್ ಆದರೆ ಆಗಿರುವುದು 36,624 ಹೆಕ್ಟೇರ್, ಕೊಳ್ಳೇಗಾಲದಲ್ಲಿ 48,510 ಹೆಕ್ಟೇರ್ ಪ್ರದೇಶಕ್ಕೆ 48,527, ಯಳಂದೂರಿನಲ್ಲಿ 10,035 ಹೆಕ್ಟೇರ್ ಪ್ರದೇಶಕ್ಕೆ 11,160 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಗುಂಡ್ಲುಪೇಟೆ ತಾಲೂಕಿನಲ್ಲೇ ಹೆಚ್ಚು ಬೀಳು ಪ್ರದೇಶದಲ್ಲೇ ಕೃಷಿ ಚಟುವಟಿಕೆ ನಡೆಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್.ಟಿ. ಚಂದ್ರಕಲಾ ಈಟಿವಿ ಭಾರತಕ್ಕೆ ತಿಳಿಸಿದರು.
ಬಿತ್ತನೆ ಹೆಚ್ಚಾಗಲು ಇದೇ ಕಾರಣ:
- ಲಾಕ್ಡೌನ್ ವೇಳೆ ನಗರಗಳಿಗೆ ಗುಳೇ ಹೋದ ರೈತರು ಮತ್ತೆ ಹಳ್ಳಿಯತ್ತ ಮುಖಮಾಡಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು.
- ತರಕಾರಿ ಬೆಳೆ ಸಾಗಾಣಿಕೆ ಮತ್ತು ಮಾರಾಟ ಕಷ್ಟವಾಗಿದ್ದರಿಂದ ಜೋಳ, ಉದ್ದು, ಹೆಸರು, ಅಲಸಂದೆ ಇನ್ನಿತರೆ ಬೆಳೆಗಳತ್ತ ಮುಖ ಮಾಡಿದ್ದು.
- ಸಕಾಲಕ್ಕೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಜೊತೆಗೆ ಕೊಳ್ಳೇಗಾಲ ಹಾಗೂ ಯಳಂದೂರು ಭಾಗಕ್ಕೆ ಕಬಿನಿಯಿಂದ ನೀರು ಬಿಟ್ಟಿದ್ದರಿಂದ ಬೀಳು ಭೂಮಿಯಲ್ಲೂ ಬಿತ್ತನೆಯಾಗಿದೆ.
- ಲಾಕ್ಡೌನ್ ವೇಳೆಯಲ್ಲಿ ರೈತರಿಗೆ ಗ್ರೀನ್ ಪಾಸ್ ನೀಡಿದ್ದು ಜೊತೆಗೆ ರೈತ ಸಂಪರ್ಕ ಕೇಂದ್ರಗಳು, ರಸಗೊಬ್ಬರ ಮಳಿಗೆಗಳನ್ನು ತೆರೆಯಲು ಅವಕಾಶ ಕೊಟ್ಡಿದ್ದು ಕೂಡ ಕೃಷಿ ಚಟುವಟಿಕೆಗೆ ಪೂರಕ ಅಂಶವಾಯಿತು.
ಜಿಲ್ಲೆಯಲ್ಲಿ ಈಗ 4,500 ಎಕರೆ ಬೀಳು ಭೂಮಿಯಲ್ಲಿ ಬಿತ್ತನೆ ಕಾರ್ಯ ನಡೆದಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು ಕೃಷಿಯತ್ತ ಮರಳಿ ಮುಖ ಮಾಡಿರುವವರಿಗೆ ಮತ್ತೊಮ್ಮೆ ವಿಮುಖವಾಗವಾದಂತೆ ಕೃಷಿ ಇಲಾಖೆ ಯೋಜನೆ ರೂಪಿಸಬೇಕಿದೆ.