ಚಾಮರಾಜನಗರ: ದಳದವರಿಗೆ ಬಿಜೆಪಿ ಅವರು ಸರಿಯಾಗಿ ಮಕ್ಮಲ್ ಟೋಪಿ ಹಾಕಿದ್ದಾರೆಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಲೇವಡಿ ಮಾಡಿದ್ದಾರೆ.
ಗುಂಡ್ಲುಪೇಟೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಕೊಟ್ಟು ಮಂಗ ಆಗಿದೆ. ಈ ಚುನಾವಣೆ ಮೂಲಕ ಜೆಡಿಎಸ್ ಅವಕಾಶವಾದಿಗಳು ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದರು ಪ್ರತ್ಯೇಕವಾಗಿ ಸ್ಪರ್ಧಿಸಿದ್ದರೆ ಕಾಂಗ್ರೆಸ್ಗೆ ಮೇಯರ್ ಸ್ಥಾನ ಸಿಗುತ್ತಿತ್ತು. ಆದರೆ, ಜೆಡಿಎಸ್ ಬಿಜೆಪಿಯನ್ನು ಬೆಂಬಲಿಸಿತು. ಜೆಡಿಎಸ್ ನವರಿಗೆ ರಾಜಕೀಯವಾಗಿ ಸ್ವಲ್ಪವೂ ಕೂಡ ರಾಜಕೀಯ ಘನತೆ, ಗೌರವವಿಲ್ಲ. ಬಿಜೆಪಿಗೆ ಸಪೋರ್ಟ್ ಮಾಡುವ ಜೆಡಿಎಸ್ ಹೇಗೆ ಸೆಕ್ಯೂಲರ್ ಪಾರ್ಟಿ ಆಗಲಿದೆ ಎಂದು ಪ್ರಶ್ನಿಸಿದರು.
ರಾಷ್ಟ್ರಪತಿ ಚುನಾವಣೆಯಲ್ಲಿ ಬುಡಕಟ್ಟು ಮಹಿಳೆ ಎಂದು ಬಿಜೆಪಿಗೆ ಜೆಡಿಎಸ್ ಸಪೋರ್ಟ್ ಮಾಡಿತ್ತು. ಈಗ ಮೈಸೂರು ಮೇಯರ್ ಚುನಾವಣೆಯಲ್ಲಿ ಏಕೆ? ಬಿಜೆಪಿಯನ್ನು ಬೆಂಬಲಿಸಿತು ಎಂದು ಜೆಡಿಎಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಬಿಜೆಪಿ ಏನು ಮಾಡ್ತಿದೆ: ಮಳೆ ಅವಾಂತರಕ್ಕೆ ಕಾಂಗ್ರೆಸ್ ಕಾರಣ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಸಿಎಂ ಹೇಳುವುದು ವೇದವಾಕ್ಯವಲ್ಲ. ಮೂರು ವರ್ಷದಿಂದ ಬಿಜೆಪಿಯವರು ಏನು ಮಾಡುತ್ತಿದ್ದಾರೆ?. ಯಡಿಯೂರಪ್ಪ ಅವಧಿಯಲ್ಲಿ ಪ್ರವಾಹ ಬಂದಿತ್ತಲ್ಲ. ಅದಾದ ನಂತರ ಯಾಕೆ ಸರ್ಕಾರ ಕ್ರಮ ಕೈಗೊಂಡಿಲ್ಲ. 3 ವರ್ಷದಿಂದ ಏನು ಮಾಡ್ತಾ ಇದೀರಿ. ನಾವು ಮಾಡಿರುವುದು ತಪ್ಪು ಎಂದು ಹೇಳುತ್ತಿದ್ದಾರೆ. ಅದನ್ನೇಕೆ ಸರಿಪಡಿಸಲಿಲ್ಲ? ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಜನರು ಕಾಯುತ್ತಿದ್ದು ಆದಷ್ಟು ಬೇಗ ಈ ಜನವಿರೋಧಿ ಸರ್ಕಾರವನ್ನು ಕಿತ್ತೊಗೆಯುತ್ತಾರೆ. ತಿಂಗಳಿಗೊಮ್ಮೆ ಮೋದಿ ರಾಜ್ಯಕ್ಕೆ ಬರುತ್ತೇನೆ ಎನ್ನುತ್ತಿದ್ದು ಅವರ ವರ್ಚಸ್ಸು ಕಡಿಮೆ ಆಗುತ್ತಿದೆ ಎಂದು ಹೇಳಿದರು.
ರಾಜಕೀಯ ದ್ವೇಷದಿಂದ ತನಿಖೆ: ಕಾಂಗ್ರೆಸ್ ಅವಧಿಯಲ್ಲಾದ ಶಿಕ್ಷಕರ ನೇಮಕಾತಿಯನ್ನು ತನಿಖೆ ಮಾಡಲಾಗುವುದು ಎನ್ನುವುದರ ಬಗ್ಗೆ ಮಾತನಾಡಿ, ಯಾವ ತನಿಖೆಯನ್ನಾದರೂ ಮಾಡಲಿ, ನಾವು ಹೆದರಲ್ಲ. ಶೇ 40ರಷ್ಟು ಕಮಿಷನ್ ಆರೋಪ ಮಾಡಿದ್ದಕ್ಕೆ ಹಳೆಯದನ್ನು ಕೆದಕುತ್ತಿದ್ದಾರೆ. ರಾಜಕೀಯ ದ್ವೇಷವಷ್ಟೇ ಇವರ ಸರ್ಕಾರದಲ್ಲಿ ಎಡಿಜಿಪಿ ಅಮೃತ್ ಪಾಲ್ ಜೈಲಿಗೆ ಹೋಗಿರುವುದು ಏಕೆ? ಏನು ಅಮೃತ್ ಅವರ ಅತ್ತೆ ಮನೆ ಎಂದು ಜೈಲಿಗೆ ಕಳುಹಿಸಿದ್ದಾರಾ? ಎಂದು ಪಿಎಸ್ಐ ನೇಮಕಾತಿ ಹಗರಣದ ಬಗ್ಗೆ ಕಿಡಿಕಾರಿದರು.
ಬಿಜೆಪಿ ವಲಸಿಗರ ಪಾರ್ಟಿ:ಭಾರತ್ ಜೋಡೋ ಅಲ್ಲ, ಕಾಂಗ್ರೆಸ್ ಜೋಡೋ ಮಾಡಲಿ ಎಂಬ ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿ, ಯಾರೋ ಒಬ್ಬಿಬ್ಬರು ಕಾಂಗ್ರೆಸ್ ಬಿಟ್ಟು ಹೋದರೆ ಕಾಂಗ್ರೆಸ್ ಏನೂ ಮಾಯವಾಗಲ್ಲ. ಜನಸಂಘದಲ್ಲಿರುವವರೆಲ್ಲ ಈಗ ಬಿಜೆಪಿಯಲ್ಲಿದ್ದರಾ? ಬಿಜೆಪಿ ವಲಸಿಗರ ಪಾರ್ಟಿ ಆಗಿದೆ. ಎಸ್. ಟಿ ಸೋಮಶೇಖರ್ ಏನ್ ಆರ್ಎಸ್ಎಸ್ಸಾ? ಸೋಮಣ್ಣ ಆರ್ಎಸ್ಎಸ್ ನವರಾ..? ಸುಧಾಕರ್, ಬೈರತಿ ಸಂಘ ಪರಿವಾರದವರಾ? ಸಿಎಂ ಬೊಮ್ಮಾಯಿ ಆರ್ಎಸ್ಎಸ್ನವರಾ..? ಬಿಜೆಪಿ ವಲಸಿಗರ ಪಾರ್ಟಿ ಆಗಿದೆ ಎಂದು ವ್ಯಂಗ್ಯ ಮಾಡಿದರು.
ಓದಿ:ಬೆಂಗಳೂರಿಗೆ ಒಬ್ಬ ಸ್ವತಂತ್ರ ಸಚಿವರನ್ನೂ ನೇಮಿಸಿಲ್ಲ, ಬೇಜವಾಬ್ಧಾರಿ ಆಡಳಿತ ನಿಲ್ಲಿಸಿ: ಸಿದ್ದರಾಮಯ್ಯ ವಾಗ್ದಾಳಿ