ಕೊಳ್ಳೇಗಾಲ (ಚಾಮರಾಜನಗರ):ಭೂ ಸುಧಾರಣೆ, ಎಪಿಎಂಸಿ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ದ ಧಿಕ್ಕಾರ ಕೂಗುತ್ತಾ ಎಡಿಬಿಐ ಸರ್ಕಲ್ವರಗೆ ಸಾಗಿ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಬಸವರಾಜು ಮಾತನಾಡಿ, ಪ್ರಧಾನಿ ಮೋದಿ ಅವರು ಕಪ್ಪು ಹಣ ತಂದು ದೇಶ ಉದ್ಧಾರ ಮಾಡುತ್ತಾರೆ ಎಂದು ಭಾವಿಸಿದ್ದೆವು. ಆದರೆ, ನೋಟು ಅಮಾನ್ಯೀಕರಣದಿಂದ ಕಾರ್ಖಾನೆಗಳು ಮುಚ್ಚಿದವು, ಇದೀಗ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ತಂದಿದ್ದಾರೆ ಇದರಿಂದ ರೈತರಿಗೆ ಅನಾನೂಕೂಲವಾಗುತ್ತಿದೆ. ಈಗಿಂದಿಗಲೇ ಭೂ ಸುಧಾರಣಾ, ಎಪಿಎಂಸಿ ಹಾಗೂ ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆಗಳ ಸುಗ್ರೀವಾಜ್ಞೆ ಹಿಂಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಿ ಪ್ರಧಾನ ಮಂತ್ರಿಗಳೇ ದೇಶ ಬಿಟ್ಟು ತೊಲಗಿ ಎಂದು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದೇ ವೇಳೆ ರಸ್ತೆಯಲ್ಲಿ ಬೆಂಕಿ ಹಚ್ಚುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ವಾಹನ ದಟ್ಟನೆ ಉಂಟಾಗಿ ಸಂಚಾರಕ್ಕೆ ಅಸ್ತವ್ಯಸ್ತವಾಗಿ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದರು.