ಚಾಮರಾಜನಗರ: ಸಿಎಂ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿದಿದ್ದಕ್ಕೆ ಮನನೊಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದೊಡ್ಡನಾಗಪ್ಪ ಎಂಬವರ ಮಗ ನಾಗರಾಜಪ್ಪ ಅಲಿಯಾಸ್ ರವಿ(32) ಆತ್ಮಹತ್ಯೆ ಶರಣಾಗಿರುವ ಅಭಿಮಾನಿ.
BSY ಪದತ್ಯಾಗ, ಅಭಿಮಾನಿ ಪ್ರಾಣ ತ್ಯಾಗ.. ಕಂಬನಿ ಮಿಡಿದ ಯಡಿಯೂರಪ್ಪ
ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಕಟ್ಟಾ ಅಭಿಮಾನಿಯಾಗಿದ್ದ ರವಿ ಎಂಬ ಯುವಕನು ಸಿಎಂ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿದಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತ ಯುವಕನು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಕಟ್ಟಾ ಅಭಿಮಾನಿಯಾಗಿದ್ದು, ಯಡಿಯೂರಪ್ಪ ರಾಜೀನಾಮೆ ವಿಚಾರ ತಿಳಿದು ಹಲವರ ಬಳಿ ಬೇಸರ ಹೊರಹಾಕಿದ್ದ ಎನ್ನಲಾಗಿದೆ. ಆದರೆ ಇಂದು ಮುಂಜಾನೆ ತಾನು ನಡೆಸುತ್ತಿದ್ದ ಹೋಟೆಲ್ನಲ್ಲಿ ನೇಣಿಗೆ ಶರಣಾಗಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗುಂಡ್ಲುಪೇಟೆ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಿಎಸ್ವೈ ಸಂತಾಪ: ಅಭಿಮಾನಿ ಆತ್ಮಹತ್ಯೆಗೆ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಆತ್ಮಹತ್ಯೆಗೆ ಶರಣಾದ ಸುದ್ದಿ ಅತೀವ ನೋವು ಹಾಗೂ ಬೇಸರ ತರಿಸಿದೆ. ರಾಜಕಾರಣದಲ್ಲಿ ಏರಿಳಿತಗಳು ಸಹಜ. ಇದಕ್ಕಾಗಿ ಪ್ರಾಣಾರ್ಪಣೆ ಮಾಡಿಕೊಳ್ಳಲು ಮುಂದಾಗುವುದು ಸರ್ವಥಾ ಒಪ್ಪಲಾಗದು. ಇದರಿಂದ ಕುಟುಂಬಕ್ಕಾಗುವ ನಷ್ಟ ಯಾರಿಂದಲೂ ಭರಿಸಲಾಗದು. ಅವರ ಕುಟುಂಬದ ನೋವಿನೊಂದಿಗೆ ತಾನಿದ್ದು, ಅಭಿಮಾನ ಅತಿರೇಕಕ್ಕೆ ಹೋಗದಿರಲಿ ಎಂದು ಮನವಿ ಮಾಡಿದ್ದಾರೆ.