ಕೊಳ್ಳೇಗಾಲ: ಸುಳ್ಳು ದಾಖಲೆ ಸೃಷ್ಟಿಸಿ ಜಮೀನು ಲಪಾಟಿಯಿಸಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ನಡೆದಿದೆ.
ರಘು ಎಂಬ ವ್ಯಕ್ತಿ ನಕಲಿ ದಾಖಲೆ ಸೃಷ್ಟಿಸಿರುವ ಆರೋಪ ಕೇಳಿ ಬಂದಿದೆ. ತಾಲೂಕಿನ ಪಾಳ್ಯ ಗ್ರಾಮದ ಸರ್ವೇ ನಂ. 609B2 ಯಲ್ಲಿನ 1.37 ಎಕರೆ ಜಮೀನಿನ ಮಾಲೀಕ ಮಾದನಾಯಕ ಎಂಬ ಹೆಸರಿನಲ್ಲಿದ್ದ ಜಮೀನನ್ನು ನಕಲಿ ಪ್ರಮಾಣ ಪತ್ರ ಮಾಡಿಸಿ ನಕಲಿ ಖಾತೆ ಮಾಡಿಸಿಕೊಳ್ಳಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಜಮೀನಿನ ಮಾಲೀಕ ಮಾದನಾಯಕನ ಮೊಮ್ಮಗ ರಾಜು ಕೊಳ್ಳೇಗಾಲ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾನೆ.
ಸುಳ್ಳು ದಾಖಲೆ ಸೃಷ್ಟಿಸಿ ಜಮೀನು ಲಪಟಾಯಿಸಿರುವ ಆರೋಪ: ದೂರುದಾರ ರಾಜು ಪ್ರತಿಕ್ರಿಯೆ ಘಟನೆಯ ವಿವರ:
ಘಟನೆಯ ಕುರಿತಂತೆ ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿರುವ ರಾಜು ಎಂಬುವರು ಹೇಳುವುದಿಷ್ಟು:
ತಾಲೂಕಿನ ಪಾಳ್ಯ ಗ್ರಾಮದ ಸರ್ವೇ ನಂಬರ್ 609B2 ಯಲ್ಲಿನ 1.37 ಎಕರೆ ಜಮೀನು ಮಾದನಾಯಕ ಎಂಬುವರ ಬಳಿ ಇರುತ್ತದೆ. 1991 ರಿಂದಲೂ ಈ ಜಮೀನು ಅವರ ಅಧೀನದಲ್ಲಿದ್ದು, 1999ರಲ್ಲಿ ಮಾದನಾಯಕ ತೀರಿಕೊಂಡ ನಂತರ ನನ್ನ ತಾಯಿ ಸಿದ್ದಮ್ಮ, ನಾನು (ರಾಜು) ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿರುತ್ತೇವೆ. ಆದರೆ ಅನಿವಾರ್ಯ ಕಾರಣದಿಂದ ಕೆಲವು ವರ್ಷ ವ್ಯವಸಾಯ ಕೈಬಿಡಲಾಗಿ ಬೆಂಗಳೂರಿನಲ್ಲಿ ವಾಸವಿದ್ದೆ. ಸಿದ್ದಮ್ಮ ಜಮೀನು ನೋಡಿಕೊಳ್ಳುತ್ತಿದ್ದರು.
ಬಳಿಕ ಕೋವಿಡ್ ಕಾರಣದಿಂದ ಕೆಲಸ ಕಳೆದುಕೊಂಡು ಊರಿಗೆ ವಾಪಸ್ಸಾದೆ. ನಮಗಿದ್ದ ಜಮೀನಿಗೆ ಸರ್ಕಾರದ ಧನ ಸಹಾಯ ಪಡೆಯಲು ಆರ್ಟಿಸಿ ಪಡೆದಾಗ ನನ್ನ ತಾತ ಮಾದನಾಯಕ ಹೆಸರಲ್ಲಿದ್ದ ಸರ್ವೇ ನಂಬರ್ 609B2 ಯಲ್ಲಿನ 1.37 ಎಕರೆ ಜಮೀನು 2016-17ರಲ್ಲಿ ಸೀಗಮ್ಮ ಹೆಸರಿಗೆ ಖಾತೆಯಾಗಿರುವುದು ಕಂಡು ಬಂದಿರುತ್ತದೆ.
ಸೀಗಮ್ಮ ಅವರ ಹೆಸರಿಗೆ ಖಾತೆ ಹೇಗೆ ಬದಲಾಯ್ತು? ಎಂದು ಪರಿಶೀಲಿಸಿದಾಗ ಸೀಗಮ್ಮ ಅವರ ಮೊಮ್ಮಗ ರಘು ಎಂಬುವrನ್ನು ಮಾದನಾಯಕ ಬಿನ್ ಮಾದನಾಯಕ ಎಂಬ ಸುಳ್ಳು ದಾಖಲೆ ಸೃಷ್ಟಿಸಿ ಮಾದನಾಯಕ ಸೀಗಮ್ಮನ ಗಂಡನೆಂದು ಮೋಸದಿಂದ ಖಾತೆಯನ್ನು ಮಾಡಿಸಿದ್ದಾನೆ. ರಘು ತಮ್ಮ ತಾತನ ಹೆಸರಾದ ಬೊ. ಮಾದನಾಯಕ ಎಂಬ ಹೆಸರಿನಲ್ಲಿ 'ಬೊ' ಎಂಬ ಪದ ತೆಗೆದು ಮಾದನಾಯಕ ಎಂದು ತಿದ್ದುಪಡಿ ಮಾಡಿದ್ದಾನೆ.
ತಾಲ್ಲೂಕು ಕಚೇರಿಯಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ನನ್ನ ತಾತನ ಆಸ್ತಿಯನ್ನು ಲಪಾಟಿಯಿಸಿದ್ದಾರೆ. ಜಮೀನಿನ ಮೇಲೆ ಬ್ಯಾಂಕ್ನಲ್ಲಿ ಲೋನ್ ಕೂಡ ಪಡೆದಿದ್ದಲ್ಲದೇ ಕಬಿನಿ ನೀರಾವರಿ ಅಧಿಕಾರಿಗಳ ಜೊತೆಗೂಡಿ ಜಮೀನಿನಲ್ಲಿ ಬೋರ್ ವೆಲ್ ತೆರೆಸಿದ್ದೇವೆ ಎಂದು ಹಣ ಕೂಡ ಪಡೆದಿದ್ದಾನೆ. ಸರ್ಕಾರಕ್ಕೆ ವಂಚಿಸಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ರಾಜು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ರಾಜು, ಪ್ರಕರಣದಲ್ಲಿ ಕೆಲವು ಅಧಿಕಾರಿಗಳು ಕೂಡ ಶಾಮೀಲಾಗಿದ್ದು, ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೆ ತಮಗೆ ಏನೂ ಗೊತ್ತಿಲ್ಲದಂತೆ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.