ಚಾಮರಾಜನಗರ :ಕೊರೊನಾ ಲಾಕ್ಡೌನ್ ಪರಿಣಾಮ ವರ್ಕ್ ಫ್ರಂ ಹೋಂ, ಆನ್‌ಲೈನ್ ತರಗತಿಗಳೆಂಬ ಹೊಸ ಕಲಿಕಾ ಹಾಗೂ ಕಾರ್ಯದ ವಿಧಾನವೇನೋ ಬಂದಿದೆ. ಆದರೆ, ಇಲ್ಲಿನ ಗ್ರಾಮಗಳು ಇನ್ನೂ 2G ಸೇವೆಯನ್ನೇ ಪಡೆಯುತ್ತಿರುವುದರಿಂದ ಇಂಟರ್ನೆಟ್ಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದಿಲ್ಲಾ ಒಂದ್ರೀತಿಯ ನೆಟ್‌ವರ್ಕ್ ಸಮಸ್ಯೆಯಿಂದ ಇಂಥವರ ಪಾಡು ದೇವರಿಗೇ ಪ್ರೀತಿ.
ಹನೂರು ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಹೂಗ್ಯಂ, ಪೆದ್ದನಪಾಲ್ಯ, ಜಲ್ಲಿಪಾಳ್ಯ, ನಲ್ಲೂರು, ಜಲ್ಲಿಪಾಳ್ಯ ಗ್ರಾಮಗಳಲ್ಲಿ ಡೇಟಾ ಸೇವೆ ಇಲ್ಲದಿರುವುದರಿಂದ 20 ಕಿ.ಮೀ ದೂರದ ನಾಲ್‌ರೋಡ್, ಸಂದನಪಾಳ್ಯಗಳಿಗೆ ಇಲ್ಲಿನ ನೂರಾರು ವಿದ್ಯಾರ್ಥಿಗಳು, ಉದ್ಯೋಗಿಗಳು ನಿತ್ಯ ಅಲೆದಾಡುತ್ತಿದ್ದಾರೆ.
ಅಲ್ಲಲ್ಲಿ ಛತ್ರಿ ಹಿಡಿದುಕೊಂಡು, ಟಾರ್ಪಲ್ ಕಟ್ಟಿಕೊಂಡು ಗುಡ್ಡಗಳ ಮೇಲೆ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದು, ವರ್ಕ್ ಫ್ರಂ ಹೋಂ ಮಾಡಬೇಕಾದ ಉದ್ಯೋಗಿಗಳು ಕಾಡಿನ ರಸ್ತೆ, ಬೆಟ್ಟಗುಡ್ಡಗಳಲ್ಲಿ ಲ್ಯಾಪ್‌ಟಾಪ್ ಹಿಡಿದು ಕೂರುತ್ತಿದ್ದಾರೆ. ಇತ್ತ ಹೂಗ್ಯಂ ಗ್ರಾ.ಪಂ.ಗೆ ಒದಗಿಸಿರುವ ಬಿಎಸ್ಎನ್ಎಲ್ ಡೇಟಾ ಸೇವೆಯನ್ನು ನೂರಾರು ಮಂದಿಗೆ ಒದಗಿಸುವುದು ದೂರದ ಮಾತಾಗಿದೆ.
ಹೂಗ್ಯಂನ ಕೆಲವು ಐಟಿ ಉದ್ಯೋಗಿಗಳು ನಾಲ್ ರೋಡ್ನಲ್ಲಿ ರೂಮ್‌ವೊಂದನ್ನು ಬಾಡಿಗೆ ಪಡೆದು ಕೆಲಸ ನಿರ್ವಹಿಸುತ್ತಿದ್ದೇವೆ. ಬೆಳಗ್ಗೆ ತಿಂಡಿ ತಿಂದು ಮಧ್ಯಾಹ್ನಕ್ಕೆ ಊಟ ತೆಗೆದುಕೊಂಡು ಬರಲಿದ್ದು, ಸಂಜೆ ಕೆಲಸ ಮುಗಿಸಿ ಹಿಂತಿರುಗಲಿದ್ದೇವೆ. ಕೆಲ ಮಹಿಳಾ ಉದ್ಯೋಗಿಗಳು ಮಾರ್ಟಳ್ಳಿ, ರಾಮಾಪುರ ಗ್ರಾಮಗಳ ನೆಂಟರ ಮನೆಗೆ ಹೋಗಿ ಅಲ್ಲಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲಸದ ಒತ್ತಡಕ್ಕಿಂತ ನೆಟ್ ವರ್ಕ್ ಹುಡುಕುವ ಒತ್ತಡವೇ ಹೆಚ್ಚು ಎಂದು ಅಳಲು ತೋಡಿಕೊಳ್ಳುತ್ತಾರೆ ಹೂಗ್ಯಂ ಗ್ರಾಮದ ಐಟಿ ಉದ್ಯೋಗಿ ರಾಜೇಂದ್ರ.
ಹೂಗ್ಯಂ ಗ್ರಾಪಂ ವ್ಯಾಪ್ತಿಯಲ್ಲಿ ಈ ಬಾರಿ ನಾಲ್ವರು ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟ್ ಸಿಕ್ಕಿದೆ. ಶಿಕ್ಷಣ ಕೊಡಿಸಲು ಇಲ್ಲಿನ ಪಾಲಕರು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಪಂಚಾಯತ್ ನೆಟ್ ವರ್ಕ್ ಕೂಡ ಒಂದು ದಿನ ಸರಿಯಿದ್ದರೇ ಇನ್ನೊಂದು ದಿನ ಸರಿಯಿರುವುದಿಲ್ಲ. ಬೆಳಗ್ಗೆ ಹೊತ್ತು ಪಾಲಕರು ತಮ್ಮನ್ನು ನೆಟ್‌ವರ್ಕ್ ಸಿಗುವ ಜಾಗಕ್ಕೆ ಬಿಟ್ಟು ಸಂಜೆ ಬಂದು ಕರೆದೊಯ್ಯಲಿದ್ದಾರೆ.
ಒಮ್ಮೊಮ್ಮೆ ತುರ್ತು ಕರೆಗಳಿಗೂ ನೆಟ್ ವರ್ಕ್ ಸಿಗುವುದಿಲ್ಲ ಎಂದು ವಿದ್ಯಾರ್ಥಿ ಪ್ರವೀಣ್ ಕುಮಾರ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು. ಈ ಗಡಿಯಂಚಿನ ಗ್ರಾಮಗಳ ದೂರ ಸಂಪರ್ಕ ವ್ಯವಸ್ಥೆ ಸ್ಥಿತಿ ತೀರಾ ಶೋಚನೀಯವಾಗಿದೆ. ಡಿಜಿಟಲ್ ಇಂಡಿಯಾಗೆ ಅಣಕವಾಡಿದಂತಿಗೆ. 5G ಬರುವ ಹೊತ್ತಿನಲ್ಲಿ ಈ ಗ್ರಾಮಗಳ ಜನರು ಈಗಲೂ ನೆಟ್ ವರ್ಕ್ ಸಮಸ್ಯೆಯಲ್ಲೇ ಒದ್ದಾಡುತ್ತಿದ್ದಾರೆ.
ಓದಿ:ಕಲಬೆರಕೆ ಹಾಲು ಹಗರಣ: ಮತ್ತಿಬ್ಬರು ಅಧಿಕಾರಿಗಳು ಅಮಾನತು