ಚಾಮರಾಜನಗರ: ಕಬ್ಬಿಗಾಗಿ ನಿತ್ಯ ವಾಹನಗಳನ್ನು ಆನೆಗಳು ಅಡ್ಡಗಟ್ಟುವುದು ಬೆಂಗಳೂರು-ದಿಂಡಿಗಲ್ ರಾಷ್ಟೀಯ ಹೆದ್ದಾರಿಯಲ್ಲಿ ಹೆಚ್ಚಾಗುತ್ತಿದ್ದು, ಇದೀಗ ಬೊಲೆರೂ ಪಿಕಪ್ ವಾಹನವನ್ನು ಗಜರಾಜ ರಸ್ತೆಬದಿಗೆ ತಳ್ಳಿರುವ ಘಟನೆ ರಾಜ್ಯದ ಗಡಿ ಕಾರೆಪಾಳ್ಯದಲ್ಲಿ ನಡೆದಿದೆ.
ಕಬ್ಬು ತಿನ್ನಲೆಂದು ಹೆದ್ದಾರಿಯಲ್ಲಿ ಗಜರಾಜ ನಿಂತಿದ್ದ ವೇಳೆ ಮುಂದೆ ಹೋಗುತ್ತಿದ್ದ ಲಾರಿಯನ್ನು ಓವರ್ಟೇಕ್ ಮಾಡಲು ಮುಂದಾದ ಸರಕು ತುಂಬಿದ ಬೊಲೆರೋ ಪಿಕಪ್ ವಾಹನವನ್ನು ಆನೆ ತಡೆದು ರಸ್ತೆ ಬದಿಗೆ ತಳ್ಳಿ ಆತಂಕ ಸೃಷ್ಟಿಸಿತು.
ವಾಹನವನ್ನು ರಸ್ತೆಬದಿಗೆ ತಳ್ಳಿದ ಆನೆ ಕೂಡಲೇ, ಅಪಾಯ ಅರಿತ ಚಾಲಕ ವಾಹನದಿಂದ ಇಳಿದು ಪ್ರಾಣ ಉಳಿಸಿಕೊಂಡಿದ್ದಾನೆ. ವಿಡಿಯೋವನ್ನು ಮತ್ತೋರ್ವ ಚಾಲಕ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾನೆ.
ಕಾಡಾನೆ ಹಿಂಡನ್ನು ಕಂಡೊಡನೆ ನಿಧಾನಗತಿಯಲ್ಲಿ ತೆರಳಿದರೆ ಮಾತ್ರ ಅಪಾಯದಿಂದ ಪಾರಾಗಬಹುದು. ರಭಸದಿಂದ ಏನಾದರೂ ಬಂದರೇ ಗಜಪಡೆ ಬ್ರೇಕ್ ಹಾಕಲಿವೆ. ಇನ್ನು ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ತಮಿಳುನಾಡಿನ ಸತ್ಯಮಂಗಲಂ ಅರಣ್ಯ ಪ್ರದೇಶದ ನಡುವೆ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು ಆನೆಗಳ ಉಪಟಳಕ್ಕೆ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ.