ಚಾಮರಾಜನಗರ :ಪ್ರಸಿದ್ಧ ಯಾತ್ರಾಸ್ಥಳ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗ ಮಧ್ಯೆದಲ್ಲಿ ಸಿಗುವ ಕೋಣನಕೆರೆ ಕ್ರಾಸ್ನಲ್ಲಿ ಕಾಡಾನೆಯೊಂದು ಮುಖ್ಯರಸ್ತೆಗೆ ಬಂದು ನಿಂತು ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡು, ಸವಾರರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಿನ್ನೆ ಗುರುವಾರ ಸಂಜೆ ನಡೆದಿದೆ.
ರಸ್ತೆ ಬದಿಯಲ್ಲಿರುವ ಕುರುಚಲು (ಜುಜ್ಜಲು) ಗಿಡಮರಗಳನ್ನು ಮುರಿದು ಹಾಕುವ ದೃಶ್ಯ ಪ್ರಯಾಣಿಕರಿಗೆ ಕಂಡು ಬಂದಿತ್ತು. ಈ ದೃಶ್ಯವನ್ನು ದಾರಿಹೋಕರು ತಮ್ಮ ಮೊಬೈಲ್ ಮೂಲಕ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಕಾಡಿನಿಂದ ಮುಖ್ಯರಸ್ತೆಗೆ ಇಳಿದ ಕಾಡಾನೆ, ಅರ್ಧ ಗಂಟೆಗೂ ಹೆಚ್ಚುಕಾಲ ಹಿಂದೆ ಮುಂದೆ ಓಡಾಡಿ ವಾಹನ ಸವಾರರನ್ನು ಭಯಭೀತಗೊಳಿಸಿತ್ತು.
ಮಲೆಮಹದೇಶ್ವರ ಬೆಟ್ಟದ ದಾರಿಯಲ್ಲಿ ಕಾಡಾನೆ.. ರಸ್ತೆಯಲ್ಲಿದ್ದ ಬೈಕ್ ಕಡೆಗೆ ಆನೆ ತೆರಳುತ್ತಿದ್ದಂತೆ ಚಾಲಕ ಹಿಂದಕ್ಕೆ ಹೋಗಿದ್ದಾನೆ. ಅಲ್ಲಿಂದ ವಾಪಸಾಗುತ್ತಿದ್ದಂತೆ ಸ್ಥಳೀಯರ ಕಿರುಚಾಟಕ್ಕೆ ಆನೆ ಸ್ವಲ್ಪ ಗಾಬರಿಗೊಂಡಿತ್ತು. ಆದರೆ, ಈ ವೇಳೆ ಯಾವುದೇ ಅನಾಹುತ ಮಾಡಿಲ್ಲ. ಕಾಡಾನೆ ಕಾಣಿಸಿಕೊಳ್ಳುತ್ತಿದ್ದಂತೆ ಕೆಲವರು ಅಲ್ಲಿಂದ ದಿಕ್ಕಾಪಾಲಾಗಿ ಓಡಿದ್ದಾರೆ.
ಇದರ ಮಧ್ಯೆ, ಎತ್ತ ಹೋಗಬೇಕೆಂಬುದು ತಿಳಿಯದೆ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುತ್ತಿದ್ದ ಕಾಡಾನೆಯನ್ನು ಸ್ಥಳೀಯರು ಕೂಗಾಡಿ ಕಾಡಿಗೆ ಓಡಿಸುವ ಪ್ರಯತ್ನ ಮಾಡಿದರು. ಆದರೆ, ಅರ್ಧ ಗಂಟೆಯಾದ್ರೂ ಕಾಡಾನೆ ರಸ್ತೆಯಿಂದ ಕದಲಿರಲಿಲ್ಲ. ಸದ್ಯ ಕಾಡಾನೆಯಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ. ಅದು ಕಾಡಿಗೆ ತೆರಳಿದ ಬಳಿಕ ವಾಹನ ಸವಾರರು ಸಂಚಾರ ಆರಂಭಿಸಿದ್ದಾರೆ.
ಇದನ್ನೂ ಓದಿ:ಕೊಡಗು: ಹೈಡೋಸೇಜ್ ಇಂಜೆಕ್ಷನ್ನಿಂದ ಕಾಡಾನೆ ಸಾವು..?