ಕರ್ನಾಟಕ

karnataka

ETV Bharat / state

ಅಭಿಮನ್ಯು ಚಕ್ರವ್ಯೂಹಕ್ಕೆ ಸಿಲುಕಿದ ಪುಂಡಾನೆ: ನಿಟ್ಟುಸಿರು ಬಿಟ್ಟ ರೈತರು - kannada news

ಆಸ್ತಿ - ಪಾಸ್ತಿ ನಷ್ಟ ಉಂಟು ಮಾಡುತ್ತಿದ್ದ ರೇಡಿಯೋ ಕಾಲರ್ ಅಳವಡಿಸಿದ್ದ ಪುಂಡಾನೆ ಸೆರೆ- ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸಾಕಾನೆಳಿಂದ ಯಶಸ್ವಿ ಕಾರ್ಯಾಚರಣೆ

elephant-caught-in-abhimanyus-labyrinth-sighing-farmers
ಅಭಿಮನ್ಯು ಚಕ್ರವ್ಯೂಹಕ್ಕೆ ಸಿಲುಕಿದ ಪುಂಡಾನೆ: ನಿಟ್ಟುಸಿರು ಬಿಟ್ಟ ರೈತರು

By

Published : Jan 10, 2023, 11:10 PM IST

ಚಾಮರಾಜನಗರ: ಜನರ ಮೇಲೆ ದಾಳಿಗೆ ಮುಂದಾಗುತ್ತಿದ್ದ ಹಾಗೂ ರೈತರ ಜಮೀನುಗಳಿಗೆ ಲಗ್ಗೆ ಇಟ್ಟು ಫಸಲು, ಆಸ್ತಿ-ಪಾಸ್ತಿ ನಷ್ಟ ಉಂಟು ಮಾಡುತ್ತಿದ್ದ ರೇಡಿಯೋ ಕಾಲರ್ ಅಳವಡಿಸಿದ್ದ ಪುಂಡಾನೆಯನ್ನು ಅಭಿಮನ್ಯು ಅಂಡ್ ಟೀಂ ಸೆರೆ ಹಿಡಿದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯ ವ್ಯಾಪ್ತಿಯ ಕಡೆಕೋಟಿ ಪ್ರದೇಶದಲ್ಲಿ ಪುಂಡಾನೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕೊನೆಗೂ ಯಶಸ್ವಿಯಾಗಿದ್ದಾರೆ.

ಕಾಡಾನೆಯನ್ನು ಸೆರೆ ಹಿಡಿದು ಸ್ಥಳಾಂತರಿಸುವಂತೆ ರೈತರು ಅರಣ್ಯ ಇಲಾಖೆಯವರಿಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಕಳೆದ ಡಿಸೆಂಬರ್​ 21 ರಂದು ಮೇಲಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆಸಿ ಡಿಸೆಂಬರ್ 30 ರಂದು ಕಾಡಾನೆ ಸೆರೆಗೆ ಅನುಮತಿ ಪಡೆಯಲಾಗಿತ್ತು. ಆನೆಯ ಚಲನ-ವಲನ ಪರಿಶೀಲಿಸಿ ಜನವರಿ 8 ರಂದು ಪತ್ತೆ ಹಚ್ಚುವ ಕಾರ್ಯ ಚುರುಕುಗೊಳಿಸಲಾಗಿತ್ತು.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸಾಕಾನೆಗಳಾದ ಕೂಂಬಿಂಗ್ ಆಪರೇಷನ್ ಸ್ಪೆಷಲಿಸ್ಟ್​ಗಳಾದ ಅಭಿಮನ್ಯು, ಮಹೇಂದ್ರ, ಗಣೇಶ ಮತ್ತು ಭೀಮ ಆನೆಗಳನ್ನು ನಿಯೋಜನೆ ಮಾಡಿಕೊಂಡು, ಪಶು ವೈಧ್ಯಾಧಿಕಾರಿಗಳಾದ ಡಾ. ಮಿರ್ಜಾ ವಾಸಿಂ, ಡಾ.ರಮೇಶ್ ಹಾಗೂ ಡಾ. ಮುಜೀಬ್ ರೆಹಮಾನ್ ಹಾಗೂ ಸಹಾಯಕರನ್ನು ಬಳಸಿಕೊಂಡು ಆನೆ ಹಿಡಿಯುವ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸತತ ಪರಿಶ್ರಮದ ಫಲವಾಗಿ ಕಾಡಾನೆಗೆ ಅರವಳಿಕೆ ಚುಚ್ಚು ಮದ್ದು ನೀಡುವ ಮೂಲಕ ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ. ಸೆರೆ ಸಿಕ್ಕ ರೇಡಿಯೋ ಕಾಲರ್ ಅಳವಡಿಸಿರುವ ಪುಂಡಾನೆಯನ್ನು ಬಂಡೀಪುರ ವಿಭಾಗ ವ್ಯಾಪ್ತಿಯ ಐನೂರು ಮಾರಿಗುಡಿ ವಲಯದ ರಾಂಪುರ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲಾಗುತ್ತಿದೆ. ಅಭಿಮನ್ಯು ಪರಾಕ್ರಮದ ನಡುವೆ ಸದ್ಯ ಪುಂಡಾನೆ ಸೋತು ಶರಣಾಗಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ಕಾಡಂಚಿನ ಭಾಗಗಳಲ್ಲಿ ಹೆಚ್ಚಾದ ಆನೆ ಹಾವಳಿ: ಹಾಸನ, ದಕ್ಷಿಣ ಕನ್ನಡ, ಚಾಮರಾಜನಗರ ಸೇರಿದಂತೆ ಕಾಡಾಂಚಿನ ಪ್ರದೇಶದಲ್ಲಿ ಕಾಡಾನೆ ದಾಳಿ ನಿರಂತರವಾಗಿ ನಡೆಯುತ್ತಲೇ ಇರುತ್ತದೆ, ಕಾಡಾನೆ ದಾಳಿಯಿಂದಾಗಿ ಸ್ಥಳೀಯರು ಆತಂಕದಲ್ಲೇ ಜೀವನ ಸಾಗಿಸುವ ಪ್ರಸಂಗ ಎದುರಾಗಿದೆ. ಈ ಬಗ್ಗೆ ಸರ್ಕಾರದ ವಿರುದ್ಧ ಕೂಡ ಆಕ್ರೋಶ ವ್ಯಕ್ತವಾಗಿದೆ. ಅರಣ್ಯ ಇಲಾಖೆ ತಮ್ಮಿಂದಾಗುವ ಎಲ್ಲ ಪ್ರಯತ್ನವನ್ನು ಮಾಡುತ್ತಿದ್ದರು. ಕೆಲವೊಮ್ಮೆ ಆನೆ ದಾಳಿಯಿಂದ ಊರ ಜನರು ಸಾವಿಗೀಡಾಗಿರುವ ಉದಾಹರಣೆಯೂ ಇದೆ.

ಸರ್ಕಾರದಿಂದ 15 ಲಕ್ಷ ಪರಿಹಾರ: ಇತ್ತೀಚಿಗೆ ಮೈಸೂರಿನಲ್ಲಿ ಮೂವರನ್ನು ಬಲಿ ಪಡೆದಿದ್ದ ಒಂಟಿ ಸಲಗವನ್ನು ಅರಣ್ಯಾಧಿಕಾರಿಗಳು ಆಪರೇಷನ್​ ಎಲಫೆಂಟ್​ ಖ್ಯಾತಿಯ ಆನೆಗಳಿಂದ ಅರವಳಿಕೆ ಮದ್ದು ನೀಡುವ ಮೂಲಕ ಒಂಟಿ ಸಲಗವನ್ನು ಸೆರೆ ಹಿಡಿದಿದ್ದರು. ಬೆಳಗಾವಿ ಅಧಿವೇಶನ ಸಂದಭರ್ದದಲ್ಲಿ ಕಾಡು ಪ್ರಾಣಿಯ ದಾಳಿಯಿಂದ ಮೃತಪಟ್ಟವರ ಕುಟುಂಬದವರಿಗೆ 15 ಲಕ್ಷರೂಪಾಯಿ ಪರಿಹಾರವನ್ನು ತುರ್ತಾಗಿ ನೀಡಲು ಕ್ರಮ ತೆಗದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್​. ಅಶೋಕ್​ ತಿಳಿಸಿದ್ದರು

ಇದನ್ನೂ ಓದಿ:ಚಾಮರಾಜನಗರ: ವಾಮಾಚಾರಕ್ಕೆ ಜೀವಂತ ಗೂಬೆ ಸಾಗಿಸುತ್ತಿದ್ದ ಇಬ್ಬರ ಬಂಧನ

ABOUT THE AUTHOR

...view details