ಚಾಮರಾಜನಗರ :ಬಂಡೀಪುರದ ಸಾಕಾನೆಯೊಂದು ಕಳೆದ 3 ತಿಂಗಳಿಂದ ಕಾಡಾನೆಗಳ ಜೊತೆಯೇ ಇದ್ದು ಶಿಬಿರದಿಂದ ದೂರ ಇರುವ ಮನೋಪ್ರವೃತ್ತಿ ಹೊರ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ರಾಂಪುರ ಆನೆ ಶಿಬಿರದಿಂದ ಮೂರನೇ ಬಾರಿಗೆ ಭಾಸ್ಕರ ಎಂಬ 10 ವರ್ಷದ ಗಂಡಾನೆಯೊಂದು ಪರಾರಿಯಾಗಿದೆ. ಕಾಡಾನೆಗಳೊಟ್ಟಿಗೆ ಸೇರಿಕೊಂಡಿದ್ದು, ಕಾಡಲ್ಲೇ ಸ್ವಚ್ಛಂದವಾಗಿ ವಿಹರಿಸುತ್ತಿದ್ದಾನೆ.
ಕಳೆದ 3 ತಿಂಗಳುಗಳ ಹಿಂದೆ ಅರಣ್ಯಕ್ಕೆ ಮೇಯಲು ಬಿಟ್ಟಿದ್ದ ವೇಳೆ ಕಾಡಾನೆಗಳೊಟ್ಟಿಗೆ ಭಾಸ್ಕರ ಸೇರಿಕೊಂಡಿದ್ದಾನೆ. ಮಾವುತರನ್ನು ಕಂಡರೆ ಆನೆ ಓಡಿ ಹೋಗುತ್ತಿದೆ. ಸದ್ಯ ಇಲಾಖೆ ನಿಗಾದಲ್ಲೇ ಇದೆ. ಅರವಳಿಕೆ ನೀಡಿ ಆನೆಯನ್ನು ಕರೆತರಲು ಅನುಮತಿ ಕೇಳಲಾಗಿದೆ. ಇನ್ನು ಅನುಮತಿ ಸಿಕ್ಕಿಲ್ಲ ಎಂದು ಬಂಡೀಪುರ ಎಸಿಎಫ್ ರವಿಕುಮಾರ್ ಮಾಹಿತಿ ನೀಡಿದ್ದಾರೆ.