ಚಾಮರಾಜನಗರ: ಬೆಂಗಳೂರು-ದಿಂಡಿಗಲ್ ರಾಷ್ಟೀಯ ಹೆದ್ದಾರಿ ಹಾದುಹೋಗುವ, ಚಾಮರಾಜನಗರ-ತಮಿಳುನಾಡು ಗಡಿಭಾಗ ಆಸನೂರು ಸಮೀಪ ಆನೆಗಳು ವಾಹನಗಳ ಮೇಲೆ ದಾಳಿ ಮಾಡಿರುವ ಘಟನೆ ಶನಿವಾರ ಸಂಜೆ ನಡೆದಿದೆ.ದಿಢೀರ್ ರಸ್ತೆ ಮಧ್ಯೆ ಮರಿ ಆನೆಯೊಂದಿಗೆ ಬಂದ ಎರಡು ಆನೆಗಳು ಎದುರಿಗೆ ಬಂದ ವಾಹನಗಳ ಮೇಲೆ ದಾಳಿ ಮಾಡಲು ಮುಂದಾಗಿವೆ. ಪೊಲೀಸ್ ಜೀಪೊಂದು ದಾಳಿಯಿಂದ ತಪ್ಪಿಸಿಕೊಂಡರೆ, ಅದರ ಹಿಂದಿದ್ದ ಎರಡು ಕಾರುಗಳು ಜಖಂಗೊಂಡಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನೆಯಿಂದ ಅರ್ಧತಾಸಿಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಬೈಕ್ ಹಾಗು ಇತರೆ ವಾಹನ ಸವಾರರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಕಾಡಿಗಟ್ಟಿದ ಬಳಿಕ ಸಂಚಾರ ಆರಂಭವಾಗಿದೆ. ಇನ್ನು ಕಬ್ಬಿನ ಲಾರಿಗಳು ಬರುವಾಗ ಅವನ್ನು ಅಡ್ಡ ಹಾಕಿ ಕಬ್ಬು ತಿನ್ನುವುದು ಈ ಆನೆಗಳಿಗೆ ಅಭ್ಯಾಸವಾಗಿದೆಯಂತೆ ಈ ಕಾರಣಕ್ಕೆ ಆಗಾಗ್ಗೆ ರಸ್ತೆಬದಿ ಬಂದು ಬೀಡುಬಿಟ್ಟಿರುತ್ತವೆ.
ಆನೆಗಳು ಕಾರಿನ ಮೇಲೆ ದಾಳಿ ಮಾಡುವ ವಿಡಿಯೋ ಭಾರೀ ವೈರಲ್ ಆಗುತ್ತಿದ್ದಂತೆ ಈ ದೃಶ್ಯವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ತಮ್ಮದೇ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೆಲವು ಮೂರ್ಖ ವೀಕ್ಷಕರು ಅನಾಗರೀಕ ವರ್ತನೆ ತೋರಿದ್ದಾರೆ. ಇದು ಸ್ವೀಕಾರಾರ್ಹವಲ್ಲ. ಆನೆಗಳು ಸೌಮ್ಯವಾಗಿರುತ್ತವೆ ಎಂಬ ಕಾರಣಕ್ಕಾಗಿ ಅವರು ಈ ರೀತಿ ವರ್ತಿಸುತ್ತಿದ್ದಾರೆ. ಈ ಸೌಮ್ಯ ದೈತ್ಯರು ತಮ್ಮ ಶಕ್ತಿಯನ್ನು ತೋರಿಸಲು ಹೆಚ್ಚು ಸಮಯವೇನು ತೆಗೆದುಕೊಳ್ಳುವುದಿಲ್ಲ ಎಂದು ತಮ್ಮದೇ ರೀತಿಯಲ್ಲಿ ಖಾರವಾಗಿ ಬರೆದುಕೊಂಡಿದ್ದಾರೆ.