ಚಾಮರಾಜನಗರ: ದೇವಾಲಯಕ್ಕೆ ತೆರಳುತ್ತಿದ್ದಾಗ ಕಾಡಾನೆ ದಾಳಿ ಮಾಡಿದ್ದು, ಓರ್ವ ವ್ಯಕ್ತಿ ಮೃತಪಟ್ಟು, ಇನ್ನೊಬ್ಬ ಪಾರಾಗಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಸಮೀಪದ ಇಂಡಿಗನತ್ತ ಅರಣ್ಯದಲ್ಲಿ ಶನಿವಾರ ನಡೆದಿದೆ. ಬೆಂಗಳೂರು ಮೂಲದ ಗೋವಿಂದರಾಜು ಮೃತರು. ಇವರ ಗೆಳೆಯ ಲೋಕೇಶ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಮಹದೇಶ್ವರ ಬೆಟ್ಟಕ್ಕೆ ಬಂದು ಮಹದೇಶ್ವರ ಸನ್ನಿಧಿಯಲ್ಲಿ ಪೂಜೆ ಮುಗಿಸಿದ ಬಳಿಕ ನಾಗಮಲೆಗೆ ರಾತ್ರಿ ವೇಳೆ ತೆರಳುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.
ಇಂಡಿಗನತ್ತ ಹತ್ತಿರವಿರುವ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಸಮೀಪ ಆನೆ ದಾಳಿ ಮಾಡಿದೆ. ಗೋವಿಂದರಾಜು ಆನೆ ತುಳಿಕ್ಕೆ ಸಿಲುಕಿ ಸ್ಥಳದಲ್ಲೇ ಅಸುನೀಗಿದ್ದಾರೆ. ಲೋಕೇಶ್ ಸ್ಥಳದಿಂದ ಓಡಿಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿದೆ. ಮಲೆಮಹದೇಶ್ವರ ಬೆಟ್ಟ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರಾತ್ರಿ ವೇಳೆ ನಾಗಮಲೆ ತೆರಳಿದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಆನೆಗಳ ಸಂಖ್ಯೆ ಏರಿಕೆ: ಹುಲಿ ಗಣತಿಯಲ್ಲಿ ರಾಜ್ಯದಲ್ಲೇ ಅಗ್ರಸ್ಥಾನ ಪಡೆದುಕೊಂಡ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಆನೆಗಳ ಸಂಖ್ಯೆಯಲ್ಲೂ ಮೊದಲ ಸ್ಥಾನ ಪಡೆದಿದೆ. ಬಂಡೀಪುರ ರಾಜ್ಯದಲ್ಲೇ ಅತಿ ಹೆಚ್ಚು ಆನೆಗಳಿರುವ ಅರಣ್ಯ ಪ್ರದೇಶವಾಗಿದ್ದು, ಇಲ್ಲಿ 1,116 ಆನೆಗಳಿವೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ 484 ಆನೆಗಳಿದ್ದು, ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ 557 ಆನೆಗಳಿವೆ. ಕಾವೇರಿ ವನ್ಯಜೀವಿ ಧಾಮದಲ್ಲಿ 236 ಆನೆಗಳಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ರಾಜ್ಯದಲ್ಲಿ ಒಟ್ಟು 6,395 ಆನೆಗಳಿವೆ ಎಂದು ವರದಿಯಾಗಿದೆ.