ಕೊಳ್ಳೇಗಾಲ: ತಾಲ್ಲೂಕಿನ ಸುರಪುರ ಗ್ರಾಮಕ್ಕೆ ಕಾಲುವೆ ನೀರು ನುಗ್ಗಿದ ಪರಿಣಾಮ ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ, ಹಾವು-ಚೇಳು ಮನೆಗೆ ಸೇರುವ ಆತಂಕ ಉಂಟಾಗಿದೆ.
ವ್ಯವಸಾಯದ ಅನುಕೂಲಕ್ಕೆ ಬಿಟ್ಟ ನಾಲೆಯ ನೀರು, ಗ್ರಾಮದ ಚರಂಡಿ ನೀರಿನ ಜೊತೆ ಸೇರಿ ಮನೆ ಬಾಗಿಲಿಗೆ ಚಾಚಿಕೊಂಡಿದೆ. ಕಸ, ಕೊಳಚೆ ನೀರು ಮಿಶ್ರಿತಗೊಂಡು ಗ್ರಾಮಸ್ಥರಲ್ಲಿ ರೋಗ ಹರಡುವ ಭೀತಿ ಹೆಚ್ಚಾಗಿದೆ. ಗ್ರಾಮದ ಸಮೀಪವಿರುವ ಕಾಲುವೆಯಲ್ಲಿ ಗಿಡ-ಗಂಟಿಗಳು ಬೆಳೆದು, ರಾಶಿ-ರಾಶಿ ಕಸ ಕಡ್ಡಿಗಳಿಂದ ಹೂಳು ತುಂಬಿಕೊಂಡಿದೆ.
ಇದರಿಂದ ಕಾಲುವೆಗೆ ಬಂದ ನೀರು ಸರಾಗವಾಗಿ ಹರಿದು ಹೋಗದೆ ಸಮೀಪದ ಜಮೀನಿಗೆ ನುಗ್ಗಿ, 1 ಎಕರೆ ಅರಿಶಿನ ಬೆಳೆಯು ಸಂಪೂರ್ಣ ನಾಶವಾಗಿದೆ. ಫಲ ಕೊಡುವ ಸಮಯದಲ್ಲಿ ಬೆಳೆ ಕಳೆದುಕೊಂಡ ರೈತ ರವಿ ಈ ಘಟನೆಯಿಂದಾಗಿ ಚಿಂತೆಗೀಡಾಗಿದ್ದಾರೆ. ಈ ಬಗ್ಗೆ ಪಿಡಿಓ ಹಾಗೂ ಕಬಿನಿ ನೀರಾವರಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಆದರೂ ಇದುವರೆಗೆ ಯಾವುದೇ ಕ್ರಮ ತೆಗೆದುಕೊಳ್ಳದೆ, ಭೇಟಿ ನೀಡದೆ ಸುಮ್ಮನಿದ್ದಾರೆ ಎಂದು ರವಿ ಆರೋಪಿಸಿದ್ದಾರೆ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಅರಿಶಿನ ಬೆಳೆ ಕಾಲುವೆ ನೀರಿನಿಂದ ನಾಶವಾಗಿದೆ. ಇದಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.