ಚಾಮರಾಜನಗರ: ಲಾಕ್ಡೌನ್ ಅವಧಿಯಲ್ಲೂ ಶಾಲೆಯ ನಂಟನ್ನು ಬಿಡದೇ ಕರ್ತವ್ಯ ಪ್ರಜ್ಞೆ, ಪರಿಸರ ಕಾಳಜಿ ತೋರುತ್ತಿದ್ದ ಶಿಕ್ಷಕರನ್ನು ಇಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಗುಂಡ್ಲುಪೇಟೆ ತಾಲೂಕಿನ ಹೊಂಗಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಸಚಿವರು, ಶಾಲಾವರಣ, ಕೊಠಡಿಗಳು, ಶಾಲೆಯ ವ್ಯವಸ್ಥೆ ಕಂಡು"ಇದೊಂದು ಸಾರ್ಥಕ ಕ್ಷಣ, ದೈವಿಕ ಭಾವನೆ " ಮೂಡುತ್ತಿದೆ ಎಂದು ಶಿಕ್ಷಕ ಮಹಾದೇಶ್ವರಸ್ವಾಮಿ ಕಾರ್ಯಕ್ಕೆ ಸಂತಸ ಹೊರ ಹಾಕಿದರು.
ಶಾಲಾ ಕೊಠಡಿಗಳಿಗೆ ಡಾ. ಎಪಿಜೆ ಅಬ್ದುಲ್ ಕಲಾಂ, ಶ್ರೀನಿವಾಸ ರಾಮಾನುಜನ್, ಕುವೆಂಪು, ಷೇಕ್ಸ್‌ಪಿಯರ್ ಹೆಸರನ್ನಿಟ್ಟಿರುವುದು, ದಾನಿಗಳ ಸಹಾಯದಿಂದ ಬಿಸಿಯೂಟಕ್ಕಾಗಿ ತಟ್ಟೆ-ಲೋಟವನ್ನು ವ್ಯವಸ್ಥಿತವಾಗಿಟ್ಟಿರುವುದು, ಶಾಲಾವರಣದ ನೈರ್ಮಲ್ಯ, ಶೌಚಾಲಯದಲ್ಲಿ 24 ತಾಸು ಇರುವ ನೀರಿನ ವ್ಯವಸ್ಥೆ, ವಿದ್ಯಾರ್ಥಿಗಳಂತೆ ಶಿಕ್ಷಕರು, ಎಸ್ಡಿಎಂಸಿ ಸದಸ್ಯರಿಗೆ ಸಮವಸ್ತ್ರ, ಐಡಿ ಕಾರ್ಡ್ ಕೊಟ್ಟಿರುವುದನ್ನು ಕಂಡು ಚಕಿತರಾದರು.