ಚಾಮರಾಜನಗರ: SSLC ಪರೀಕ್ಷೆ ನಡೆಸಲು ಸಜ್ಜಾಗಿರುವ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿರುವ ಶಿಕ್ಷಣ ಸಚಿವರ ಕ್ರಮ ನನ್ನ ಪ್ರಕಾರ ಸರಿಯಾಗಿದೆ ಎಂದು ಮಾಜಿ ಶಿಕ್ಷಣ ಸಚಿವ, ಶಾಸಕ ಎನ್.ಮಹೇಶ್ ಹೇಳಿದರು.
ಶಿಕ್ಷಣ ಸಚಿವರ ಕ್ರಮಕ್ಕೆ ಸಮ್ಮತಿಸಿದ ಮಾಜಿ ಶಿಕ್ಷಣ ಸಚಿವ ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಪ್ರಥಮ ವರ್ಷದಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ದ್ವಿತೀಯ ಪಿಯುಸಿಯಲ್ಲಿ ಅಂಕಗಳನ್ನು ನೀಡಲಿದ್ದಾರೆ. ಇಲ್ಲಿ ಯಾರನ್ನೂ ಅನುತ್ತೀರ್ಣರನ್ನಾಗಿ ಮಾಡುವುದಿಲ್ಲ. ಒಂದು ವೇಳೆ ತನಗೆ ಕಡಿಮೆ ಅಂಕ ಬಂದಿದೆ ಎಂದು ಅಸಮಾಧಾನ ಹೊರಹಾಕುವ ವಿದ್ಯಾರ್ಥಿಗಳು ನೇರವಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿ ಅದನ್ನು ಸರಿಪಡಿಸಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ ಎಂದು ಹೇಳಿದರು.
ಪ್ರಸ್ತುತ ವರ್ಷದಲ್ಲಿ ಒಂಭತ್ತನೇ ತರಗತಿಗಳು ನಡೆಯದಿರುವ ಕಾರಣದಿಂದಾಗಿ SSLC ಪರೀಕ್ಷೆ ಮಾಡುವ ಅವಶ್ಯಕತೆ ಸರ್ಕಾರಕ್ಕೆ ಬಂದಿದೆ. ಹೀಗಾಗಿ ಭಾಷೆಗಳಿಗೆ ಒಂದು ಪತ್ರಿಕೆ ಹಾಗೂ ವಿಷಯಗಳಿಗೆ ಒಂದು ಪತ್ರಿಕೆಯಂತೆ ಕೇವಲ ಎರಡು ಪತ್ರಿಕೆಗಳಲ್ಲಿ ಪರೀಕ್ಷೆ ನಡೆಸಲು ಶಿಕ್ಷಣ ಸಚಿವರು ಶಿಸ್ತುಬದ್ಧವಾಗಿ ಕ್ರಮ ಕೈಗೊಂಡಿದ್ದಾರೆ. ಶಿಕ್ಷಣ ಸಚಿವರ ನಡೆ ನನ್ನ ಪ್ರಕಾರ ಸರಿಯಾಗಿದೆ ಎಂದರು.
ಕೊರೊನಾ ಎರಡನೇ ಅಲೆ ಮುಗಿಯುತ್ತಾ ಬಂದಿದೆ. 3ನೇ ಅಲೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಅಲೆ ಎದುರಾದಾಗ ಅದನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹಾಗೂ ಆರೋಗ್ಯ ಸೇವೆಗಳನ್ನು ಒದಗಿಸುವ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈಗಿನಿಂದಲೇ ಸಜ್ಜಾಗಬೇಕಿದೆ. ಪ್ರಕರಣಗಳು ಕಡಿಮೆಯಾದವು ಎಂದು ಮೈ ಮರೆಯಬಾರದು ಎಂದು ಎಚ್ಚರಿಸಿದರು.