ಚಾಮರಾಜನಗರ: ಕರ್ನಾಟಕದಿಂದ ತಮಿಳುನಾಡಿಗೆ ಬಂಡೀಪುರ ಅರಣ್ಯ ಮಾರ್ಗವಾಗಿ ತೆರಳಬೇಕಾದರೆ ಇ-ಪಾಸ್ ಕಡ್ಡಾಯವಾಗಿದ್ದು, ಇ-ನೋಂದಣಿ ಇಲ್ಲವಾದಲ್ಲಿ ಪ್ರವೇಶ ನಿರಾಕರಿಸುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕಾಡಂಚಿನ ಕೆಲ ಯುವಕರು, ಮೇಲುಕಾಮನಹಳ್ಳಿ ಚೆಕ್ ಪೋಸ್ಟ್ ಬಳಿ ಇ-ಪಾಸ್ ಮಾಡಿಕೊಡುವ ದಂಧೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದ್ದು, ಅರಣ್ಯಾಧಿಕಾರಿಗಳು ಶಾಮೀಲಾಗಿರುವ ಆರೋಪ ಕೇಳಿಬಂದಿದೆ.
ರಾಜ್ಯದಿಂದ ತಮಿಳುನಾಡಿಗೆ ಬಂಡೀಪುರ ಮಾರ್ಗವಾಗಿ ತೆರಳುವ ವಾಹನಗಳು, ತಮಿಳುನಾಡಿನ ಕೆಕ್ಕನಹಳ್ಳ ಚೆಕ್ ಪೋಸ್ಟ್ ಬಳಿ ಇ-ನೋಂದಣಿ ಮಾಡಿಸಿರುವ ದಾಖಲೆ ತೋರಿಸಿ ತಮಿಳುನಾಡಿಗೆ ಪ್ರವೇಶ ಪಡೆಯಬೇಕು. ಇಲ್ಲವಾದಲ್ಲಿ ಅಲ್ಲಿನ ಸಿಬ್ಬಂದಿ ಇ-ನೋಂದಣಿ ಮಾಡುವಂತೆ ತಿಳಿಸುತ್ತಾರೆ. ಆದರೆ, ಕೆಕ್ಕನಹಳ್ಳ ಭಾಗದಲ್ಲಿ ಸಿಗ್ನಲ್ ಸಮಸ್ಯೆ ಇರುವುದರಿಂದ ನೋಂದಣಿಗೆ ಕಷ್ಟ ಆಗುತ್ತದೆ. ನೆಟ್ ವರ್ಕ್ ಸಮಸ್ಯೆಯನ್ನೇ ದುರುಪಯೋಗ ಮಾಡಿಕೊಂಡ ತಾಲೂಕಿನ ಮೇಲುಕಾಮನಹಳ್ಳಿ ಚೆಕ್ ಪೋಸ್ಟ್ ಸಿಬ್ಬಂದಿ, ಪಾಸ್ ಇದೆಯಾ? ಎಂದು ಕೇಳುತ್ತಾರೆ. ಇಲ್ಲವಾದಲ್ಲಿ ಪಕ್ಕದಲ್ಲಿರುವ ಗುಡಿಸಲು ಅಂಗಡಿಗೆ ಪಾಸ್ ಮಾಡಿಸಲು ಕಳುಹಿಸಿ, ವಾಹನವೊಂದಕ್ಕೆ 500ರ ವರೆಗೆ ಪ್ರವಾಸಿಗರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಆನ್ಲೈನ್ನಲ್ಲಿ ನೋಂದಣಿ ಮಾಡಲು ಯಾವುದೇ ಶುಲ್ಕ ಇರುವುದಿಲ್ಲ. ಆದರೂ ಸಹ ಪ್ರವಾಸಿಗರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗುಡಿಸಲಿನ ಅಂಗಡಿಯಲ್ಲಿ ನೋಂದಣಿ ಮಾಡಿ ವ್ಯಾಟ್ಸಪ್ ಮುಖಾಂತರ ಪಿಡಿಎಫ್ ಕಳುಹಿಸಲು ಹಣ ವಸೂಲು ಮಾಡುತ್ತಾರೆ. ಸಂಜೆಯವರೆಗೆ ಸಂಗ್ರಹವಾದ ಹಣದಲ್ಲಿ ಚೆಕ್ ಪೋಸ್ಟ್ ಸಿಬ್ಬಂದಿಗೆ ಇಂತಿಷ್ಟು ಎಂದು ಕೊಡಬೇಕು. ಅರಣ್ಯಾಧಿಕಾರಿಗಳಿಗೂ ಇಂತಿಷ್ಟು ಕೊಡಬೇಕೆಂದು ಸ್ಥಳೀಯರು ದೂರಿದ್ದಾರೆ.