ಚಾಮರಾಜನಗರ:ಇಂದು ರಾತ್ರಿಯಿಂದ ಕೊರೊನಾ ಕರ್ಫ್ಯೂ ಘೋಷಿಸಿರುವುದರಿಂದ ಮದ್ಯಪ್ರಿಯರು ಎಣ್ಣೆ ಅಂಗಡಿ ಮುಂದೆ ಸಾಲುಗಟ್ಟಿ ನಿಂತು ಬ್ಯಾಗ್, ಚೀಲಗಳಲ್ಲಿ ಮದ್ಯ ಬಾಟಲಿಗಳನ್ನು ಕೊಂಡೊಯ್ದ ಘಟನೆ ನಗರದಲ್ಲಿ ನಡೆಯಿತು.
ಮದ್ಯ ಸಿಗದ ಭೀತಿ.. ಬ್ಯಾಗ್, ಚೀಲಗಳಲ್ಲಿ ಎಣ್ಣೆ ಬಾಟಲ್ ತುಂಬಿಸಿ ಕೊಂಡೊಯ್ದ ಗುಂಡುಪ್ರಿಯರು!!
ಇಂದು ರಾತ್ರಿಯಿಂದ ಕೊರೊನಾ ಕರ್ಫ್ಯೂ ಹಿನ್ನೆಲೆ ಚಾಮರಾಜನಗರದಲ್ಲಿ ಮದ್ಯದಂಗಡಿ ಮುಂದೆ ಮದ್ಯವ್ಯಸನಿಗಳು ಎಣ್ಣೆ ಕೊಳ್ಳಲು ಸಾಲುಗಟ್ಟಿ ನಿಂತಿದ್ದರು. ಕೇಸುಗಟ್ಟಲೇ ಬಾಟಲ್ಗಳನ್ನು ಕೊಂಡೊಯ್ದರು.
ಸಂಜೆ 6 ಆಗುತ್ತಿದ್ದಂತೆ ಮದ್ಯದಂಗಡಿಗಳಿಗೆ ವೈನ್ ಸ್ಟೋರ್, ಎಂಎಸ್ಐಎಲ್ ಅಂಗಡಿಗಳಿಗೆ ಧಾವಿಸಿ ಬಂದ ಯುವಕರು, ಹಿರಿಯರು ಕೇಸುಗಟ್ಟಲೆ ಬಿಯರ್, ಮದ್ಯದ ಪೌಚುಗಳನ್ನು ಕೊಂಡೊಯ್ದು, ಗುಂಡು ಸಿಕ್ಕ ಖುಷಿಯಲ್ಲಿ ತೇಲಾಡಿದರು. ಇಂದು ಕುಡಿಯಲಿಲ್ಲ ಈ ಎಣ್ಣೆ ಬಾಟಲ್ ಶನಿವಾರ, ಭಾನುವಾರ ಕುಡಿಯಲು ಎಂದು ಕೆಲ ಯುವಕರು ಪ್ರತಿಕ್ರಿಯಿಸಿದರೆ ಮತ್ತೂ ಕೆಲವರು ನಿತ್ಯ ಮದ್ಯ ಸೇವಿಸುವ ಅಭ್ಯಾಸವಿದ್ದು ಕಾಳಸಂತೆಯಲ್ಲಿ ಅಷ್ಟು ದುಡ್ಡು ಕೊಟ್ಟು ಕೊಳ್ಳುವ ಬದಲು ಹಣವಿದ್ದಷ್ಟು ಮೊದಲೇ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದರು.
ಮೊದಲ ಲಾಕ್ಡೌನ್ ವೇಳೆ ಎಣ್ಣೆ ಸಿಗದೇ ಒದ್ದಾಡಿದ ಪರಿಸ್ಥಿತಿ ಅನುಭವಿಸಿದ್ದರಿಂದ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಜನಸಂದಣಿ ಮದ್ಯದಂಗಡಿಗಳ ಮುಂದೆ ಏರ್ಪಟ್ಟು ಭರ್ಜರಿ ವ್ಯಾಪಾರವೇ ಆಗಿದೆ.