ಚಾಮರಾಜನಗರ: ಕೌಶಲ ವಿಕಾಸ್ ಯೋಜನೆಯ ಆರೋಗ್ಯ ವಲಯದಡಿ ನೀಡಲಾಗುವ ತರಬೇತಿಗೆ ವರ್ಚುವಲ್ ವೇದಿಕೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು. ಪ್ರಧಾನಮಂತ್ರಿ ಕೌಶಲ ವಿಕಾಸ್ ಯೋಜನೆ 3.0 ಕಾರ್ಯಕ್ರಮದಡಿ ಕೋವಿಡ್ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ವಿವಿಧ 6 ವಿಷಯಗಳಲ್ಲಿ ಕೌಶಲ್ಯ ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ. ದೇಶದ 26 ಜಿಲ್ಲೆಗಳ 111 ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತದೆ. ಕರ್ನಾಟಕ ರಾಜ್ಯದಿಂದ ಈ ತರಬೇತಿಗೆ ಆಯ್ಕೆಯಾಗಿರುವ ಏಕೈಕ ಜಿಲ್ಲೆ ಚಾಮರಾಜನಗರವಾಗಿದೆ.
ಚಾಮರಾಜನಗರದ ಕೆ ಪಿ ಮೊಹಲ್ಲಾದಲ್ಲಿರುವ ಭರಣಿ ಫೌಂಡೇಶನ್ ತರಬೇತಿ ಕೇಂದ್ರದಲ್ಲಿ 6 ಜಾಬ್ ರೋಲ್‍ಗಳ ಪೈಕಿ ಜನರಲ್ ಡ್ಯೂಟಿ ಅಸಿಸ್ಟೆಂಟ್ ತರಬೇತಿಗೆ ಮೊದಲ ಹಂತದಲ್ಲಿ 40 ಅಭ್ಯರ್ಥಿಗಳಿಗೆ 21 ದಿನಗಳ ತರಬೇತಿ ಆರಂಭವಾಗಲಿದೆ. ಸದ್ಯದ ಸನ್ನಿವೇಶ ಆಧರಿಸಿ ರೂಪಿಸಲಾಗಿರುವ ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಷಿಯನ್ (ಬೇಸಿಕ್), ಜನರಲ್ ಡ್ಯೂಟಿ ಅಸಿಸ್ಟೆಂಟ್, ಜಿಡಿಎ-ಅಡ್ವಾನ್ಸ್ಡ್(ಕ್ರಿಟಿಕಲ್ ಕೇರ್), ಹೋಂ ಹೆಲ್ತ್ ಎಡ್, ಮೆಡಿಕಲ್ ಎಕ್ವಿಪ್‍ಮೆಂಟ್ ಟೆಕ್ನಾಲಜಿ ಅಸಿಸ್ಟೆಂಟ್, ಫ್ಲೆಬೋಟೊಮಿಸ್ಟ್ ಈ ಜಾಬ್‍ರೋಲ್‍ಗಳಿಗೆ ತರಬೇತಿ ನೀಡಲಾಗುತ್ತಿದೆ.