ಕೊಳ್ಳೇಗಾಲ(ಚಾಮರಾಜನಗರ): ನಗರದ ಆಶ್ರಯ ಬಡಾವಣೆಯಲ್ಲಿ ಏಳಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಕಲುಷಿತ ನೀರಿನಿಂದ ಈ ಘಟನೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.
ನಗರದ 22 ನೇ ವಾರ್ಡ್ ಆಶ್ರಯ ಬಡಾವಣೆಯಲ್ಲಿ ಕುಡಿಯುವ ನೀರಿಗೆ ಚರಂಡಿ ನೀರು ಬೆರೆತಿರುವ ಶಂಕೆ ಇದೆ. ಇದನ್ನು ಸೇವಿಸಿ ಬಡಾವಣೆಯ ನಿವಾಸಿಗಳು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಲ್ಲಿ ಇಬ್ಬರು ಮಕ್ಕಳಿದ್ದು, ಓರ್ವ ಮಹಿಳೆ ಸ್ಥಿತಿ ಗಂಭೀರವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನುಳಿದವರು ಕೊಳ್ಳೇಗಾಲ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊರೊನಾ ನಡುವೆ ಕಲುಷಿತ ನೀರಿನಿಂದ ಜನರಲ್ಲಿ ಅನಾರೋಗ್ಯ ಸೃಷ್ಟಿಯಾಗಿರುವ ಘಟನೆಯಿಂದ ಬಡಾವಣೆಯ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.
ಘಟನೆ ಹಿನ್ನೆಲೆ ನಗರಸಭೆ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಬಡಾವಣೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗೆ ತೆರಳಿ ನಿವಾಸಿಗಳ ಆರೋಗ್ಯ ವಿಚಾರಿಸಿದ್ದಾರೆ.
ನಗರಸಭೆ ವತಿಯಿಂದ ಬಡಾವಣೆಯ ಸ್ವಚ್ಛತೆ ಕೈಗೊಂಡು, ಕುಡಿಯುವ ನೀರು ಕಲುಷಿತಗೊಳ್ಳಲು ಕಾರಣವಾದ ಅಂಶಗಳನ್ನು ಪತ್ತೆ ಹಚ್ಚುವ ಕಾರ್ಯ ಕೈಗೊಳ್ಳಲಾಗಿದೆ.
ಈ ಬಗ್ಗೆ ನಗರಸಭೆ ಪೌರಾಯುಕ್ತ ನಾಗಶೆಟ್ಟಿ ಅವರು ಪ್ರತಿಕ್ರಿಯಿಸಿ, ದೂರುಗಳು ಬಂದ ಹಿನ್ನೆಲೆ ಸ್ಥಳಕ್ಕೆ ಭೇಟಿ ಕೊಟ್ಟಿದ್ದೇವೆ. ಇಲ್ಲಿನ ಕುಡಿಯುವ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ ಅಂದಿದ್ದಾರೆ. ಕೆಲ ಅಸ್ವಸ್ಥರಿಗೆ ಭೇದಿ ಲಕ್ಷಣ ಇನ್ನೂ ಕೆಲವರಿಗೆ ವಾಂತಿಯಂತಹ ಲಕ್ಷಣಗಳು ಕಂಡುಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ನಂತರ ಈ ಅನಾಹುತಕ್ಕೆ ಕಾರಣ ಏನು ಎಂಬುದು ಬಳಿಕ ತಿಳಿಯಲಿದೆ ಎಂದರು.
ಈ ಸಂದರ್ಭದಲ್ಲಿ ಪ್ರಭಾರ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್, ನಗರ ಆರೋಗ್ಯ ವೈದ್ಯಾಧಿಕಾರಿ ಡಾ.ನಾಗೇಂದ್ರ, ನಗರಸಭೆ ಪರಿಸರ ಇಂಜಿನಿಯರ್ ಧನಂಜಯ್, ಎಇಇ ಅಲ್ತಾಫ್ ಅಹಮದ್, ಜೆಇ ಸಿದ್ದಪ್ಪ ಇದ್ದರು.