ಚಾಮರಾಜನಗರ: ರಾಜ್ಯದಲ್ಲಿ ಮುಂದಿನ 2-3 ದಿನಗಳಲ್ಲಿ 2,150 ವೈದ್ಯರ ನೇಮಕಾತಿಯಾಗಲಿದ್ದು, ಈ ವೇಳೆ ಮಲೆ ಮಹದೇಶ್ವರ ಬೆಟ್ಟಕ್ಕೆ ಆದ್ಯತೆಯ ಮೇಲೆ ವೈದ್ಯರ ನಿಯೋಜನೆಗೆ ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳ ಜೊತೆ ಚರ್ಚಿಸಲಾಗಿದೆ ಎಂದು ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ವಿವಿಧ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವರು, ಕೊರೊನಾ ಮೊದಲನೆ ಅಲೆಯಲ್ಲಿ ಕೇವಲ ನಗರ ಪ್ರದೇಶದಲ್ಲಿ ಮಾತ್ರ ಹೆಚ್ಚನ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆದರೆ 2ನೇ ಅಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಸೋಂಕು ಪತ್ತೆಯಾಗುತ್ತಿದೆ. ಇದು ಎಲ್ಲರ ಆತಂಕಕ್ಕೂ ಕಾರಣವಾಗಿದೆ. ಈ ಹಿಂದೆ ಗ್ರಾಮೀಣ ಪ್ರದೇಶದ ಜನರು ಹೆಚ್ಚು ಜಾಗರೂಕತೆಯಿಂದ ಇದ್ದರು. ಆದರೆ, ಈ ಬಾರಿ ಪರಿಸ್ಥಿತಿ ಬೇರೆಯೇ ಆಗಿದೆ, ಕೊರೊನಾ ನಿಯಂತ್ರಣ ಮತ್ತು ಮರಣ ಪ್ರಮಾಣ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಶ್ರಮ ವಹಿಸಬೇಕು ಎಂದರು.
ಕೋವಿಡ್ ನಿಯಂತ್ರಣ ಸಂಬಂಧ ವಿವಿಧ ಇಲಾಖಾ ಅಧಿಕಾರಿಗಳ ಜತೆ ಸಚಿವ ಸುರೇಶ್ ಕುಮಾರ್ ಸಭೆ ಸಭೆಯಲ್ಲಿ ಕೆಲ ಮಾಹಿತಿಗಳನ್ನು ನೀಡುವಲ್ಲಿ ವಿಫಲರಾದ ತಾಲೂಕು ವೈದ್ಯಾಧಿಕಾರಿ ಡಾ.ಪ್ರಕಾಶ್, ತಹಶೀಲ್ದಾರ್ ನಾಗರಾಜು ಮತ್ತು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸ್ ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ತೀವ್ರತೆ ಮತ್ತು ಪರಿಣಾಮವನ್ನು ಸಾರ್ವಜನಿಕರಿಗೆ ತಿಳಿಸಿ ಅರಿವು ಮೂಡಿಸಬೇಕು. ನೀವು 3 ಜನ ಹನೂರಿನಂತಹ ಸವಿಸ್ತಾರವಾದ ತಾಲೂಕಿನಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಮತ್ತು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಆದರೆ ನಿಮ್ಮಲ್ಲಿ ಸಮನ್ವಯತೆ ಕಾಣುತ್ತಿಲ್ಲ. ಆದ್ದರಿಂದ ನೀವೂ 3 ಜನ ಅಮಾನತಿಗೆ ಅರ್ಹರು ಎಂದು ಎಚ್ಚರಿಕೆ ನೀಡಿದರು.
ಶೀಘ್ರ ವೈದ್ಯರ ನಿಯೋಜನೆ:
ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿನ ವೈದ್ಯರು, ಆ್ಯಂಬುಲೆನ್ಸ್ ಸಮಸ್ಯೆ ಬಗ್ಗೆ ಪ್ರಸ್ತಾಪವಾದಾಗ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿ ರಾಜ್ಯದಲ್ಲಿ 2,150 ವೈದ್ಯರ ನೇಮಕಾತಿ ಅಂತಿಮ ಹಂತದಲ್ಲಿದ್ದು, ಮುಂದಿನ 2-3 ದಿನಗಳಲ್ಲಿ ವೈದ್ಯರ ನಿಯೋಜನೆಯಾಗಲಿದೆ. ಈ ವೇಳೆ ಮಹದೇಶ್ವರ ಬೆಟ್ಟಕ್ಕೆ ಹೆಚ್ಚಿನ ಒತ್ತು ನೀಡಿ ವೈದ್ಯರ ನಿಯೋಜನೆಗೆ ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದ್ದೇನೆ. ಮತ್ತು ಕಳೆದ 3 ತಿಂಗಳಿನಿಂದ ಆ್ಯಂಬುಲೆನ್ಸ್ ಸೇವೆ ಸ್ಥಗಿತಗೊಂಡಿರುವ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮವಹಿಸಿ ಸಮಸ್ಯೆ ಬಗೆಹರಿಸಲಿದ್ದಾರೆ. ಅಲ್ಲದೆ ಕೋವಿಡ್ ಸೋಂಕಿತರ ಅನುಕೂಲಕ್ಕಾಗಿ ಶೀಘ್ರ 10 ಹಾಸಿಗೆಗಳಿಗೆ ಆಮ್ಲಜನಕ ಸಾಂದ್ರಕಗಳನ್ನು ಅಳವಡಿಸಲು ಕ್ರಮವಹಿಸಲಾಗುವುದು ಮತ್ತು ಕೋವಿಡ್ ಕೇರ್ ಸೆಂಟರ್ ತೆರೆಯವ ಸಂಬಂಧ ಮುಂದಿನ ದಿನಗಳಲ್ಲಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಗೋಪಿನಾಥಂಗೆ ಭೇಟಿ:
ಹನೂರು ತಾಲೂಕಿನ ಗಡಿಯಂಚಿನ ಗ್ರಾಮ ಗೋಪಿನಾಥಂಗೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ಸಭೆ ನಡೆಸಿದ ಸಚಿವರು, ಗ್ರಾಮದಲ್ಲಿ ಕೋವಿಡ್ ಸ್ಥಿತಿಗತಿಯ ಬಗ್ಗೆ, ಸೋಂಕಿತರು ಮತ್ತು ಮರಣ ಹೊಂದಿರುವವರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗ್ರಾಮಸ್ಥರಿಂದ ಮಾಹಿತಿ ಪಡೆದರು. ಇದೇ ವೇಳೆ ಗ್ರಾಮದ ಮುಖಂಡರ ಜೊತೆ ಚರ್ಚಿಸಿ ಯಾರಿಗಾದರೂ ಸೋಂಕು ಕಂಡುಬಂದಲ್ಲಿ ಹೋಂ ಐಸೋಲೇಷನ್‌ಗೆ ಒತ್ತು ನೀಡದೆ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲು ಸಹಕರಿಸುವಂತೆ ಮನವಿ ಮಾಡಿದರು.
ಗೋಪಿನಾಥಂಗೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ಸಭೆ ನಡೆಸಿದ ಸಚಿವ ಸುರೇಶ್ ಕುಮಾರ್ ಗ್ರಾಮಸ್ಥರು ಕೋವಿಡ್ ಸೋಂಕು ಪರೀಕ್ಷೆ ತುಂಬಾ ಕಡಿಮೆ ಮಾಡುತ್ತಿದ್ದಾರೆ. ಇದರಿಂದ ಸೋಂಕಿತರನ್ನು ಶೀಘ್ರವಾಗಿ ಪತ್ತೆ ಹಚ್ಚುವಲ್ಲಿ ಸಮಸ್ಯೆಯಾಗುತ್ತಿದೆ ಎಂದು ಅಹವಾಲು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಕೋವಿಡ್ ಗುಣಲಕ್ಷಣ ಇರುವವರಿಗೆ ಆ್ಯಂಟಿಜನ್ ಟೆಸ್ಟ್ ಮಾಡಲು ಜಿಲ್ಲಾಡಳಿತದಿಂದ ಕ್ರಮವಹಿಸಲಾಗುವುದು. ಅದರಲ್ಲಿ ಸೋಂಕು ಕಂಡುಬಂದವರನ್ನು ಆರ್‌ಟಿಪಿಸಿಆರ್ ಟೆಸ್ಟ್ಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.