ಚಾಮರಾಜನಗರ:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕುರ್ಚಿ ಭಯದ ಜತೆ ಇಲ್ಲಿಗೆ ಬಂದಾಗ ಜನರ ಕೈಯಿಂದ ಬೈಸಿಕೊಳ್ಳುವ, ಹೊಡೆಸಿಕೊಳ್ಳುವ ಭಯವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.
ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ಅಧಿಕಾರದಲ್ಲಿದ್ದಾಗ ಜನರಿಂದ ಬೈಸಿಕೊಳ್ಳಬೇಕೆಂಬ ಕಾರಣಕ್ಕೆ ಚಾಮರಾಜನಗರಕ್ಕೆ ಮುಖ್ಯಮಂತ್ರಿ ಬರುತ್ತಿಲ್ಲ. ಇದರೊಟ್ಟಿಗೆ, ಅವರಿಗೆ ಕುರ್ಚಿ ಭಯವೂ ಕಾಡುತ್ತಿದೆಯೆಂದು ಲೇವಡಿ ಮಾಡಿದರು.
36 ಜನರು ಮೃತಪಟ್ಟರೂ ಯಾವೊಬ್ಬ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳದೇ ಯಾರನ್ನೂ ಜವಾಬ್ದಾರಿಯನ್ನಾಗಿಸದ ಸರ್ಕಾರ ಸತ್ತಿದೆಯಾ, ಬದುಕಿದೆಯಾ? ಎಂಬುದನ್ನು ಜನರೇ ತೀರ್ಮಾನಿಸುತ್ತಾರೆ. ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರದಿಂದ ಯಾರಾದರೂ ಭೇಟಿ ಮಾಡುತ್ತಾರೆ, ಸಾಂತ್ವನ ಹೇಳುತ್ತಾರೆಂದು ಕಾಯುತ್ತಿದ್ದೆ. ಯಾರೂ ಮಾಡಲಿಲ್ಲ, ಕರುಳು ನೊಂದಿದ್ದರಿಂದ ನಾನೇ ಭೇಟಿ ಮಾಡಿ ಪಕ್ಷದ ವತಿಯಿಂದ 1 ಲಕ್ಷ ರೂ. ಕೊಡಲಾಗುತ್ತಿದೆ ಎಂದು ತಿಳಿಸಿದರು.