ಕೊಳ್ಳೇಗಾಲ: ಕೋವಿಡ್ ವ್ಯಾಪಕವಾಗಿ ಹರುಡುತ್ತಿದೆ. ಕೋವಿಡ್ ನಿರ್ನಾಮಕ್ಕೆ ಸರ್ಕಾರದ ಸೌಲಭ್ಯಗಳ ಜತೆಗೆ ಕಾಂಗ್ರೆಸ್ ಪಕ್ಷವೂ ಜನರ ಜೀವ ಉಳಿಸುವ ಉದ್ದೇಶದಿಂದ ಸಹಾಯ ಮಾಡುತ್ತಿದೆ. ಅದರಂತೆ ವೈಯಕ್ತಿಕವಾಗಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಒಂದು ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸಿಕೊಡುತ್ತಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ತಿಳಿಸಿದರು.
ಪಟ್ಟಣದ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಆವರಣದಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿ, ವಿರೋಧ ಪಕ್ಷದ ನಾಯಕರು ಹಾಗೂ ಕೆಪಿಸಿಸಿ ಅಧ್ಯಕ್ಷರು ಕೋವಿಡ್ ಸಂಕಷ್ಟದಲ್ಲಿ ಸರ್ಕಾರದ ಸೌಲಭ್ಯಗಳ ಜತೆಗೆ ಪಕ್ಷದಿಂದ ಕೈಲಾದಷ್ಟು ಸಹಾಯ ಮಾಡಬೇಕು, ಜನರ ಜೀವ ಉಳಿಸುವ ನಿಟ್ಟಿನಲ್ಲಿ ಆಯಾ ಕ್ಷೇತ್ರದ ಕಾಂಗ್ರೆಸ್ ನಾಯಕರು ಕೈಲಾದಷ್ಟು ಸಹಾಯ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. ಅದರಂತೆ ಕಾಂಗ್ರೆಸ್ ನಾಯಕರು ಹಲವು ಸೇವೆಗಳನ್ನು ಒದಗಿಸುತ್ತಿದ್ದಾರೆ.
ಕೋವಿಡ್ ಸಂಕಷ್ಟಕ್ಕೆ ಸ್ಪಂದನೆ:
ನಾನು ಸಹ ಕೊಳ್ಳೇಗಾಲ ಹಾಗೂ ನಂಜನಗೂಡು ತಾಲೂಕಿಗೆ ಒಂದೊಂದು ಉಚಿತ ಆಂಬ್ಯುಲೆನ್ಸ್ ಸೌಲಭ್ಯವನ್ನು ಕಲ್ಪಿಸಿ ಕೋವಿಡ್ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದೇನೆ. ಅಗತ್ಯವಿದ್ದರೆ ಕೊಳ್ಳೇಗಾಲ ಆಸ್ಪತ್ರೆಗೆ ಮತ್ತೊಂದು ಆಂಬ್ಯುಲೆನ್ಸ್ಅನ್ನು ಪಕ್ಷದ ವತಿಯಿಂದ ಕೊಡಿಸುತ್ತೇನೆ ಎಂದರು. ಸ್ವಲ್ಪ ದಿನದ ಹಿಂದೆಯಷ್ಟೇ ಬೈಕ್ನಲ್ಲಿ ಏಣಿ ಇಟ್ಟು ಅದರಲ್ಲಿ ಮೃತದೇಹ ಕೊಂಡೊಗ್ಯ್ದುರತೆ, ಶವ ಸಂಸ್ಕಾರ ಮಾಡಿದ್ದನ್ನು ನಾನು ಮಾಧ್ಯಮಗಳಲ್ಲಿ ನೋಡಿ ಬೇಸರವಾಯಿತು. ಅದಕ್ಕಾಗಿ ಕೊರೊನಾ ಸಮಯದಲ್ಲಿ ಉಪಯೋಗಕ್ಕೆ ಬರಲೆಂದು ಆಂಬ್ಯುಲೆನ್ಸ್ ಸೇವೆ ಒದಗಿಸುತ್ತಿದ್ದೇನೆ ಎಂದು ತಿಳಿಸಿದರು. ಇದೇ ವೇಳೆ ಕೊರೊನಾ ಸೋಂಕಿತರಿಗೆ ನೀಡುವ ಸುಮಾರು 50 ಸಾವಿರಕ್ಕೂ ಹೆಚ್ಚು ಹಣದ ಹೋಂ ಐಸೋಲೇಷನ್ ಕಿಟ್ ಆಸ್ಪತ್ರೆಗೆ ನೀಡಲಾಯಿತು.