ಚಾಮರಾಜನಗರ:ಐತಿಹಾಸಿಕ, ಭಕ್ತಿ ಪರಾಕಾಷ್ಠೆಯ ಜಾತ್ರೆ ಎಂದೇ ಜನಜನಿತವಾಗಿರುವ ಕೊಳ್ಳೇಗಾಲದ ಚಿಕ್ಕಲ್ಲೂರು ಜಾತ್ರೆಯಲ್ಲಿ ಸಾವಿರಾರು ಮಂದಿ ಭಕ್ತರು ಪಂಕ್ತಿಸೇವೆ ಸಲ್ಲಿಸಿ ತಮ್ಮ ನಂಬಿಕೆ, ಭಕ್ತಿ ಅಚಲ ಎಂಬ ಮುದ್ರೆ ಒತ್ತಿದ್ದರು. ಹೌದು.. ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲಿ ಒಂದಾಗಿರುವ ಚಿಕ್ಕಲ್ಲೂರು ಜಾತ್ರೆಯ ನಾಲ್ಕನೇ ದಿನ ಸಾವಿರಾರು ಭಕ್ತರು ಕುರಿ, ಕೋಳಿಗಳನ್ನು ಕೊಯ್ದು ಆಹಾರ ತಯಾರಿಸಿ ದೇವರಿಗೆ ಎಡೆ ಇಟ್ಟು ತಮ್ಮ ಭಕ್ತಿ, ನಂಬಿಕೆ ಪ್ರದರ್ಶನ ಮಾಡಿದರು. ಸಂಪ್ರದಾಯದ ಆಚರಣೆಗೆ ಈ ಪರಿ ನಿರ್ಬಂಧ ಹೇರಿರುವುದಕ್ಕೆ ಪ್ರಾಣಿ ದಯಾ ಸಂಘ ಮತ್ತು ಜಿಲ್ಲಾಡಳಿತದ ವಿರುದ್ಧ ಆಕ್ರೋಶವನ್ನೂ ವ್ಯಕ್ತಪಡಿಸಿದರು.
ಪ್ರಾಣಿ ಬಲಿ ಸಂಘರ್ಷ: ಕುರಿ, ಕೋಳಿಯ ಭಕ್ಷ್ಯ ತಯಾರಿಸಿ ದೇವರಿಗೆ ಎಡೆ ಇಟ್ಟು ಬಳಿಕ ಸಹಪಂಕ್ತಿ ಭೋಜನ ಮಾಡುವ ಆಚರಣೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿತ್ತು. ಈಗ 6-7 ವರ್ಷಗಳಿಂದ ಪ್ರಾಣಿ ದಯಾ ಸಂಘವು ಕೋರ್ಟ್ ಮೆಟ್ಟಿಲೇರಿದ ಪರಿಣಾಮ ಕುರಿ-ಕೋಳಿ ಕೊಯ್ಯಲು ನಿರ್ಬಂಧ ತರಲಾಗಿತ್ತು. ಚಿಕ್ಕಲ್ಲೂರಲ್ಲಿ ಯಾವುದೇ ಬಲಿಪೀಠಗಳು ಇಲ್ಲದಿರುವುದರಿಂದ ಪ್ರಾಣಿ ಬಲಿ ಕೊಡುವ ಪ್ರಶ್ನೆಯೇ ಇಲ್ಲ, ಅದು ಜನರ ಆಹಾರದ ಹಕ್ಕು ಎಂಬುದು ಒಂದು ವಾದವಾಗಿತ್ತು. ಆದರೆ, ನ್ಯಾಯಾಲಯವು ಬಲಿ ಕೊಡಲು ನಿರ್ಬಂಧ ಹೇರಿರುವುದರಿಂದ 5-6 ಚೆಕ್ ಪೋಸ್ಟ್ ನಿರ್ಮಿಸಿ ಪ್ರಾಣಿಗಳನ್ನು ಯಾರೂ ಕೊಂಡಯ್ಯಬಾರದೆಂದು ಜಿಲ್ಲಾಡಳಿತ ಹದ್ದಿನ ಕಣ್ಣಿಟ್ಟಿತ್ತು.
ಆಚರಣೆಯನ್ನು ಬಿಡಲೊಪ್ಪದ ಜನರು ಕಣ್ಮರೆಸಿ ಪ್ರಾಣಿಗಳನ್ನು ತಂದು ದೇವಾಲಯ ಆವರಣದಿಂದ ದೂರದ ಪ್ರದೇಶದಲ್ಲಿ ಅಡುಗೆ ತಯಾರಿಸಿ ಶ್ರದ್ಧೆ-ಭಕ್ತಿಯಿಂದ ಎಡೆ ಅರ್ಪಿಸಿದ್ದಾರೆ. ಜಿಲ್ಲೆ ಹೊರಜಿಲ್ಲೆಗಳಿಂದ ಬಂದ ಸಾವಿರಾರು ಭಕ್ತರು ಮಾಂಸದೂಟ ತಯಾರಿಸಿ ನೀಲಗಾರರ ಸಂಪ್ರದಾಯಕ್ಕೆ ಅನುಗುಣವಾಗಿ ಎಡೆ ಅರ್ಪಿಸಿದರು. ರಾಚಪ್ಪಾಜಿ, ಸಿದ್ದಾಪ್ಪಾಜಿ ದೇವರಿಗೆ ಮಾಂಸ, ಭಂಗಿ ಪ್ರಿಯವಾಗಿದ್ದು, ಈ ಹಿಂದೆ ಮಾಂಸದೂಟಕ್ಕೆ ಭಂಗಿ ಸೊಪ್ಪು ಹಾಕುವುದು ಇಲ್ಲವೇ ಎಡೆ ಹಾಕುವಾಗ ಭಂಗಿ ಸೊಪ್ಪು ಇಡುತ್ತಿದ್ದರು. ಈ ಬಾರಿ, ಭಂಗಿ ಘಮಲು ಇರಲಿಲ್ಲ.
ಪ್ರತಿಭಟನೆ: ಹಿಂದೂ ಜಾಗರಣ ವೇದಿಕೆ ಸೇರಿದಂತೆ ಇನ್ನಿತರ ಸಂಘಟನೆಗಳು ಚಿಕ್ಕಲ್ಲೂರು ಜಾತ್ರೆಯಲ್ಲಿ ಪಂಕ್ತಿಸೇವೆಗೆ ಅವಕಾಶ ಕಲ್ಪಿಸಬೇಕೆಂದು ಇಂದು (ಸೋಮವಾರ) ಸೇರಿದಂತೆ ಭಾನುವಾರವೂ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು. ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯಗಳಿಗೆ ತಿಲಾಂಜಲಿ ಇಟ್ಟು ಸಂಸ್ಕೃತಿಯನ್ನೇ ಅಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿ ಪೊಲೀಸರ ವಿರುದ್ಧ ಮಾತಿನ ಚಕಮಕಿಯನ್ನೂ ನಡೆಸಿದರು. ಒಟ್ಟಿನಲ್ಲಿ ಭಕ್ತರು ನಿರ್ಬಂಧದ ನಡುವೆಯೂ ಪಂಕ್ತಿ ಸೇವೆ ನಡೆಸಿ ತಮ್ಮ ಸಂಪ್ರದಾಯ ಮುಂದುವರೆಸಿದ್ದಾರೆ. ಜೊತೆಗೆ, ಪವಾಡ ಪುರುಷ ಸಿದ್ದಾಪ್ಪಾಜಿ ಮೇಲಿನ ಅಚಲ ಭಕ್ತಿಯನ್ನೂ ತೋರಿದ್ದಾರೆ.
ಇನ್ನೊಂದೆಡೆ ಕೊಪ್ಪಳದಲ್ಲಿ ಮಿರ್ಚಿಯದ್ದೇ ಹವಾ... ಲಕ್ಷಾಂತರ ಭಕ್ತರಿಗೆ ಅನ್ನದಾಸೋಹ: